×
Ad

ಬ್ಯಾಂಕ್ ಠೇವಣಿ ವಿಮೆ, ಸಾಲ ಖಾತರಿ ಮಸೂದೆ ತಿದ್ದುಪಡಿಗೆ ಕೇಂದ್ರ ಸಂಪುಟದ ಅನುಮೋದನೆ

Update: 2021-07-28 21:59 IST

ಹೊಸದಿಲ್ಲಿ, ಜು.28: ಠೇವಣಿ ವಿಮೆ ಮತ್ತು ಸಾಲ ಖಾತರಿ ಮಸೂದೆ(ತಿದ್ದುಪಡಿ)ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರಿಂದ ರಿಸರ್ವ್ ಬ್ಯಾಂಕ್ ಒಂದು ವೇಳೆ ಬ್ಯಾಂಕ್ಗಳ ಮೇಲೆ ನಿರ್ಬಂಧ ವಿಧಿಸಿದರೂ, ಖಾತೆದಾರರು 90 ದಿನದೊಳಗೆ 5 ಲಕ್ಷ ರೂ.ವರೆಗಿನ ಠೇವಣಿಯನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಬ್ಯಾಂಕ್ಗಳು ದಿವಾಳಿ ಅಥವಾ ವಹಿವಾಟು ನಿರ್ಬಂಧಕ್ಕೆ ಒಳಗಾದ ಸಂದರ್ಭದಲ್ಲಿ ಈ ಬ್ಯಾಂಕ್ಗಳಿಂದ ಹಣ ಹಿಂಪಡೆಯಲು ಆರ್ಬಿಐ ಮಿತಿ ವಿಧಿಸುತ್ತದೆ. ಈಗ ತಂದಿರುವ ತಿದ್ದುಪಡಿ ಗ್ರಾಹಕರಿಗೆ ತುಸು ನಿರಾಳತೆ ಒದಗಿಸಲಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

‘ಡಿಪೊಸಿಟ್ ಇನ್ಷುರೆನ್ಸ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಆ್ಯಕ್ಟ್’ ಉಳಿತಾಯ ಖಾತೆ, ಅವಧಿಕ ಠೇವಣಿ(ಫಿಕ್ಸೆಡ್ ಡಿಪಾಸಿಟ್), ಕರೆಂಟ್ ಅಥವಾ ರಿಕರಿಂಗ್ ಡೆಪಾಸಿಟ್ಗಳಿಗೆ ವಿಮೆ ರಕ್ಷೆ ಒದಗಿಸುತ್ತದೆ. ಜೊತೆಗೆ ವಾಣಿಜ್ಯ, ಖಾಸಗಿ, ಸರಕಾರಿ ಕ್ಷೇತ್ರದ ಬ್ಯಾಂಕ್ಗಳು ಹಾಗೂ ಭಾರತದಲ್ಲಿ ಶಾಖೆ ಹೊಂದಿರುವ ವಿದೇಶಿ ಬ್ಯಾಂಕ್ಗಳೂ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. 98.3%ದಷ್ಟು ಬ್ಯಾಂಕ್ ಖಾತೆಗಳು ಈ ಕಾಯ್ದೆಯ ರಕ್ಷಣೆ ವ್ಯಾಪ್ತಿಗೆ ಬರಲಿದೆ. ದಿವಾಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಗ್ರಾಹಕರಿಗೆ ವಿಮೆ ರಕ್ಷೆಯಡಿ ಹಣ ಮರಳಿ ಪಡೆಯಲು 8ರಿಂದ 10 ವರ್ಷ ಬೇಕಾಗುತ್ತಿತ್ತು. ಆದರೆ ಈಗ, ಒಂದು ವೇಳೆ ನಿರ್ಬಂಧವಿದ್ದರೂ, 90 ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ನಿರ್ಬಂಧಕ್ಕೆ ಒಳಗಾದ ಬ್ಯಾಂಕ್ಗಳ ವಿಷಯದಲ್ಲಿ, ಪ್ರಥಮ 45 ದಿನದಲ್ಲಿ ಠೇವಣಿ ಖಾತೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಉಳಿದ 45 ದಿನದಲ್ಲಿ ಮಾಹಿತಿಯನ್ನು ಪರಿಶೀಲಿಸಿ ಹಣ ವಾಪಸು ಮಾಡಲಾಗುತ್ತದೆ ಎಂದವರು ಹೇಳಿದ್ದಾರೆ. ಈ ಮಸೂದೆಗೆ ಸಂಸತ್ತಿನ ಉಭಯ ಸದನದ ಅನುಮೋದನೆ ದೊರೆತರೆ ಕಾಯ್ದೆಯ ರೂಪದಲ್ಲಿ ಜಾರಿಯಾಗಲಿದೆ. ಕಳೆದ ವರ್ಷ ಕೇಂದ್ರ ಸರಕಾರ ಠೇವಣಿಗಳ ಮೇಲಿನ ವಿಮೆಯ ಮೊತ್ತವನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News