ರಷ್ಯಾಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಿಷೇಧವಿದ್ದರೂ, ಪದಕ ಗೆಲ್ಲುತ್ತಿರುವ ರಷ್ಯನ್ ಸ್ಪರ್ಧಿಗಳು !

Update: 2021-07-29 08:21 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ರಷ್ಯಾ ಭಾಗವಹಿಸುತ್ತಿಲ್ಲ. ಆದರೂ ರಷ್ಯಾದ ಅಥ್ಲೀಟುಗಳು ಈಗಾಗಲೇ ಏಳು ಚಿನ್ನದ ಪದಕಗಳು ಸೇರಿದಂತೆ 22 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯಾವುದೇ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ರಷ್ಯಾಗೆ 2022ರ ತನಕ ನಿಷೇಧವಿದೆ. ಆದರೂ ಆ ದೇಶದ 335 ಅಥ್ಲೀಟುಗಳು ಒಲಿಂಪಿಕ್ಸ್ ನಲ್ಲಿ ಆರ್‍ಒಸಿ ಬ್ಯಾನರ್ ಅಡಿಯಲ್ಲಿ ಭಾಗವಹಿಸುತ್ತಿದ್ದು ಈ ನಿರ್ದಿಷ್ಟ ಸಂಘಟನೆ ಈಗಾಗಲೇ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ರಷ್ಯಾದ ಅಥ್ಲೀಟುಗಳು ಎದುರಿಸುತ್ತಿದ್ದ ಡೋಪಿಂಗ್ ಆರೋಪಗಳ ಹಿನ್ನೆಲೆಯಲ್ಲಿ ವಿಶ್ವ ಆ್ಯಂಟಿ-ಡೋಪಿಂಗ್ ಏಜನ್ಸಿ ಆ ದೇಶದ ಮೇಲೆ ನಾಲ್ಕು ವರ್ಷಗಳ ನಿಷೇಧವನ್ನು 2019ರಲ್ಲಿ ಹೇರಿತ್ತು. ಮುಂದಿನ ವರ್ಷ ಕ್ರೀಡಾ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಈ ನಿಷೇಧ ಅವಧಿಯನ್ನು ಎರಡು ವರ್ಷಕ್ಕೆ ಇಳಿಸಿದ ಪರಿಣಾಮ ನಿಷೇಧವು ಡಿಸೆಂಬರ್ 16, 2022ರ ತನಕ ಊರ್ಜಿತದಲ್ಲಿರಲಿದೆ. ಈ ಹಿನ್ನೆಲೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ಸಹಿತ ಮುಂಬರುವ ಪ್ಯಾರಾಒಲಿಂಪಿಕ್ಸ್, ಹಾಗೂ ಬೀಜಿಂಗ್‍ನಲ್ಲಿ ನಡೆಯುವ ವಿಂಟರ್ ಒಲಿಂಪಿಕ್ಸ್ ಮತ್ತು 2022ರ ಫಿಫಾ ವಿಶ್ವ ಕಪ್‍ನಲ್ಲಿ ರಷ್ಯಾ ಭಾಗವಹಿಸುವಂತಿಲ್ಲ.

ಆದರೂ ರಷ್ಯಾದ ಅಥ್ಲೀಟುಗಳು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಆರ್‍ಒಸಿ ಬ್ಯಾನರ್ ಅಡಿ ಸ್ಪರ್ಧಿಸುತ್ತಿದ್ದಾರೆ. ಆರ್‍ಒಸಿ ಎಂದರೆ ರಷ್ಯನ್ ಒಲಿಂಪಿಕ್ ಸಮಿತಿ ಆದರೆ ಸಮಿತಿ ಹೆಸರನ್ನು ಬಳಸುವುದಕ್ಕೆ ನಿರ್ಬಂಧವಿರುವುದರಿಂದ ಅಥ್ಲೀಟುಗಳು ಆರ್‍ಒಸಿ ಹೆಸರು ಬಳಸುತ್ತಿದ್ದಾರೆ. ಯಾವುದೇ ಡೋಪಿಂಗ್ ಆರೋಪ ಹೊಂದಿರದ ರಷ್ಯನ್ ಅಥ್ಲೀಟುಗಳು ಆರ್‍ಒಸಿ ಬ್ಯಾನರ್ ಅಡಿಯಲ್ಲಿ ಭಾಗವಹಿಸುತ್ತಿದ್ದಾರೆ.

ನಿಷೇಧ ಏಕೆ?

2014ರಲ್ಲಿ 800 ಮೀಟರ್ ಓಟಗಾರ್ತಿ ಯುಲಿಯಾ ಸ್ಟೆಪನೋವ ಮತ್ತಾಕೆಯ ಪತಿ ವಿಟಲಿ,  ಜರ್ಮನ್ ಸಾಕ್ಷ್ಯಚಿತ್ರವೊಂದರಲ್ಲಿ ರಷ್ಯಾದ ಆಧುನಿಕ ಡೋಪಿಂಗ್ ಕಾರ್ಯಕ್ರಮವನ್ನು ಬಯಲುಗೊಳಿಸಿದ್ದರು. ವಿಟಲಿ, ರಷ್ಯಾದ ಡೋಪಿಂಗ್ ನಿಗ್ರಹ ಏಜನ್ಸಿಯ ಮಾಜಿ ಉದ್ಯೋಗಿಯಾಗಿದ್ದರು. ಮುಂದೆ ಈ ಕುರಿತು ತನಿಖೆ ನಡೆದಾಗ ರಷ್ಯಾದ ಆಟಗಾರರು ಸೋಚಿ ವಿಂಟರ್ ಒಲಿಂಪಿಕ್ಸ್ ನಲ್ಲಿ ತಮ್ಮ ನಿರ್ವಹಣೆ ಉತ್ತಮಗೊಳಿಸಲು ಸತತ ಡ್ರಗ್ಸ್ ಬಳಸುತ್ತಿದ್ದರೆಂದು ತನಿಖಾ ವರದಿ ಹೇಳಿತ್ತು. ಇದೇ ಕಾರಣದಿಂದ 389 ರಷ್ಯನ್ ಅಥ್ಲೀಟುಗಳ ಪೈಕಿ 111 ಮಂದಿಯನ್ನು 2016 ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು. 2016 ಪ್ಯಾರಾಒಲಿಂಪಿಕ್ಸ್ ನಲ್ಲಿ ಇಡೀ ರಷ್ಯಾ ತಂಡವನ್ನೇ ನಿರ್ಬಂಧಿಸಲಾಗಿತ್ತು.

ದೇಶದ ವಿವಿಧ ಕ್ರೀಡೆಗಳ 1000ಕ್ಕೂ ಅಧಿಕ ಅಥ್ಲೀಟುಗಳಿಗೆ ಸರಕಾರ ಪ್ರೇರಿತ ಡೋಪಿಂಗ್‍ಗೆ ಸಹಾಯ ಮಾಡಲಾಗುತ್ತಿತ್ತೆಂದು ತಿಳಿದು ಬಂದಿತ್ತು.

ವಿಶ್ವ ಆ್ಯಂಟಿ ಡೋಪಿಂಗ್ ಏಜನ್ಸಿ ವಿಧಿಸಿರುವ ನಿರ್ಬಂಧ ಕೊನೆಗೊಂಡ ನಂತರವೂ ರಷ್ಯಾ ಈ ಸಂಬಂಧ ಸಂಸ್ಥೆಗೆ ತಗಲಿದ ವೆಚ್ಚ ಸಹಿತ ದಂಡವನ್ನು ತೆರಬೇಕಿದೆ.

ಕೃಪೆ: theprint.in 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News