ಮಹುವಾ ಮೊಯಿತ್ರಾ ನನ್ನನ್ನು ‘ಬಿಹಾರಿ ಗೂಂಡಾ’ ಎಂದು ಕರೆದಿದ್ದಾರೆ: ಬಿಜೆಪಿ ಸಂಸದ ದುಬೆ ಆರೋಪ

Update: 2021-07-29 12:16 GMT
ನಿಶಿಕಾಂತ್ ದುಬೆ

ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನದ ಸಂಸದೀಯ ಸಭೆಯ ವೇಳೆ ಮಹುವಾ ಮೊಯಿತ್ರಾ ಅವರು ನನ್ನನ್ನು ಮೂರು ಬಾರಿ "ಬಿಹಾರಿ ಗೂಂಡಾ" ಎಂದು ಕರೆದಿದ್ದಾರೆ ಎಂದು  ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ದುಬೆ ಆರೋಪವನ್ನು ನಿರಾಕರಿಸಿದ ಟಿಎಂಸಿ ಸಂಸದೆ, ಸಭೆಯೇ ನಡೆಯದೇ ಇರುವಾಗ ಅವರನ್ನು ನಿಂದಿಸಲು ಹೇಗೆ ಸಾಧ್ಯ ಎಂದು ತಿರುಗೇಟು ನೀಡಿದ್ದಾರೆ.

ದುಬೆ ಅವರು ಗುರುವಾರ ಲೋಕಸಭೆಯಲ್ಲಿ ಈ ಆರೋಪವನ್ನು ಹೊರಿಸಿದ್ದಾರೆ.

"ನಾನು ಈ ಸದನದ ಎಲ್ಲ ಸದಸ್ಯರ ಗಮನ ಸೆಳೆಯಲು ಬಯಸುತ್ತೇನೆ. ಸಂಸದನಾಗಿ ಇದು ನನ್ನ 13 ನೇ ವರ್ಷ. ನಿನ್ನೆ ನಡೆದ ಸಂಸದೀಯ ಸಮಿತಿಯ ಸಭೆಯಲ್ಲಿ ಮಹಿಳೆಯೊಬ್ಬರು ನನ್ನನ್ನು ''ಬಿಹಾರಿ ಗೂಂಡಾ '' ಎಂದು ಕರೆದಿದ್ದಾರೆ. ನಾನು ಇದನ್ನು ಈ ತನಕ ನೋಡಿಲ್ಲ. ಬಿಹಾರಿಗಳ ತಪ್ಪು ಏನು? ಈ ದೇಶವನ್ನು ಅಭಿವೃದ್ಧಿಪಡಿಸುವುದು ನಮ್ಮ ತಪ್ಪು. ನಾವು ಕಾರ್ಮಿಕರಾಗಿ, ಹಿಂದಿ ಮಾತನಾಡುವ ಉತ್ತರ ಪ್ರದೇಶದಿಂದ ಅಥವಾ ಮಧ್ಯಪ್ರದೇಶದಿಂದ ಬಂದಿದ್ದೇವೆ ... ನಾವು ಶ್ರಮಜೀವಿಗಳು. ನಾವು ಭಗವಾನ್ ರಾಮನಿಂದ ಪಾಠಗಳನ್ನು ಕಲಿತಿದ್ದೇವೆ" ಎಂದರು.

ಮೊಯಿತ್ರಾ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ, ನಡೆಯದ ಸಭೆಯಲ್ಲಿ ಅವರಿಗೆ ಕೆಟ್ಟ ಪದ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಮೊಯಿತ್ರಾ "ನಿಂದಿಸಿದ್ದೇನೆ ಎಂಬ ನನ್ನ ಮೇಲಿನ ಆರೋಪದಿಂದ ನಾನು ಸ್ವಲ್ಪ ಖುಷಿಯಾಗಿದ್ದೇನೆ. ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯು ನಡೆಯಲೇ ಇಲ್ಲ. ಕಾರಣ ಸಮಿತಿಯ ಯಾವುದೇ ಸದಸ್ಯ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ನಡೆಯದೆ ಇರುವ ಸಭೆಯಲ್ಲಿ ಹಾಜರಾಗದೇ ಇರುವ ಸದಸ್ಯರನ್ನು ನಾನು ನಿಂದಿಸಲು ಹೇಗೆ ಸಾಧ್ಯ? ಬೇಕಿದ್ದರೆ ಹಾಜರಿ ಪುಸ್ತಕವನ್ನು ಪರಿಶೀಲಿಸಿ'' ಎಂದು ಟ್ವೀಟಿಸಿದರು.

ತೃಣಮೂಲ ಸಂಸದೆ ತಮ್ಮ  ಟ್ವೀಟ್‌ ಅನ್ನು  ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಕಾರ್ತಿ ಚಿದಂಬರಂ ಹಾಗೂ  ನಾಸಿರ್ ಹುಸೇನ್ ಮತ್ತು ಮತ್ತೊಬ್ಬ ತೃಣಮೂಲ ಸಂಸದ ನದಿಮುಲ್ ಹಕ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News