ದೇಶದ ಜನತೆ ಪೆಗಾಸಸ್ ಅನ್ನು ಸಿಬಿಐ, ಈಡಿ, ಐಟಿ ಶಾಖೆಯಾಗಿ ನೋಡುತ್ತಾರೆ: ಕೇಂದ್ರವನ್ನು ಟೀಕಿಸಿದ ಶಿವಸೇನೆ

Update: 2021-07-29 13:15 GMT

ಹೊಸದಿಲ್ಲಿ: ಬೇಹುಗಾರಿಕೆಯ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂಬ ಪ್ರತಿಪಕ್ಷದ ಬೇಡಿಕೆಯನ್ನು ಕೇಂದ್ರಸರಕಾರವು ಅರಿತುಕೊಂಡಿಲ್ಲ ಎಂದಿರುವ ಶಿವಸೇನೆ, ದೇಶದ ಜನರು ಪೆಗಾಸಸ್ ಅನ್ನು ಕೇಂದ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಮತ್ತೊಂದು ಸಂಬಂಧಿತ ಶಾಖೆಯಾಗಿ ನೋಡುತ್ತಾರೆ ಎಂದು ಟೀಕಿಸಿದೆ.

ಸರಕಾರ ಹಾಗೂ  ವಿರೋಧ ಪಕ್ಷದ ನೂರಾರು ರಾಜಕೀಯ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಇನ್ನಿತರರು ಇಸ್ರೇಲಿ ಸೈಬರ್-ಇಂಟೆಲಿಜೆನ್ಸ್ ಕಂಪೆನಿ ಎನ್ಎಸ್ಒ ಗ್ರೂಪ್ ಅಭಿವೃದ್ಧಿಪಡಿಸಿದ ಸ್ಪೈವೇರ್ ಸಾಧನವಾದ ಪೆಗಾಸಸ್‌ನ ಗುರಿಗಳಾಗಿದ್ದಾರೆ ಎಂಬ ಆರೋಪದ ಬಗ್ಗೆ ಜಂಟಿ ಸಂಸದೀಯ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳು ಕೋರಿವೆ.

ಆರೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶಿವಸೇನೆ ಶ್ಲಾಘಿಸಿದೆ.  ಇತರ ರಾಜ್ಯಗಳ ಸಿಎಂಗಳು ಸಹ ನಾಗರಿಕರ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಕಾಪಾಡಬೇಕು. ಎಲ್ಲರನ್ನು ಜಾಗೃತಗೊಳಿಸುವ ಕೆಲಸವನ್ನು ಮಮತಾ ಮಾಡಿದ್ದಾರೆ ಎಂದು ಪಕ್ಷ ಹೇಳಿದೆ.

ಸಂಸತ್ತಿನ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಪ್ರತಿಪಕ್ಷಗಳಿಗಿಂತ ಆಡಳಿತ ಪಕ್ಷದ ಕರ್ತವ್ಯ. ಸಂಸತ್ತು ಕಾರ್ಯನಿರ್ವಹಿಸಲು ಹಾಗೂ  ಸಮಸ್ಯೆಗಳನ್ನು ಚರ್ಚಿಸಲು ಸರಕಾರ ಬಯಸದಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ. ದೇಶದ ಜನರು ಪೆಗಾಸಸ್ ಅನ್ನು ಸಿಬಿಐ, ಈಡಿ ಹಾಗೂ ಆದಾಯ ತೆರಿಗೆಯ ಮತ್ತೊಂದು ಸಂಬಂಧಿತ ಶಾಖೆಯಾಗಿ ನೋಡುತ್ತಾರೆ. ಏಕೆಂದರೆ ಕೇಂದ್ರವು ಈ ವಿಷಯದ ಬಗ್ಗೆ ಅರಿತುಕೊಂಡಿಲ್ಲ ಎಂದು ಪಕ್ಷದ ಮುಖವಾಣಿಯಾದ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News