ರೈತರ ಪ್ರತಿಭಟನೆ ವಿರುದ್ಧ ವಿವಾದಾತ್ಮಕ ವ್ಯಂಗ್ಯಚಿತ್ರ ಟ್ವೀಟಿಸಿದ ಉ.ಪ್ರ.ಬಿಜೆಪಿ

Update: 2021-07-29 15:29 GMT
photo : twitter tweet 

  ಲಕ್ನೋ,ಜು.29: ಉತ್ತರ ಪ್ರದೇಶ ಬಿಜೆಪಿಯು ಗುರುವಾರ ರೈತರ ಪ್ರತಿಭಟನೆಯ ವಿರುದ್ಧ ವ್ಯಂಗ್ಯಚಿತ್ರವೊಂದನ್ನು ಟ್ವೀಟಿಸಿರುವುದು ಹೊಸವಿವಾದವನ್ನು ಸೃಷ್ಟಿಸಿದೆ. ಕೆಲದಿನಗಳ ಹಿಂದಷ್ಟೇ ಭಾರತೀಯ ಕಿಸಾನ ಯೂನಿಯನ್ ನಾಯಕ ರಾಕೇಶ ಟಿಕಾಯತ್ ಅವರು ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯ ಏರಿಕೆಗಾಗಿ ರಾಜ್ಯ ರಾಜಧಾನಿ ಲಕ್ನೋದಲ್ಲಿ ದಿಲ್ಲಿ ಮಾದರಿಯಲ್ಲಿ ಪ್ರತಿಭಟನೆಯನ್ನು ನಡೆಸುವ ಬೆದರಿಕೆಯನ್ನೊಡ್ಡಿದ್ದರು.

ಗುರುವಾರ ಟ್ವೀಟ್ ಮಾಡಲಾಗಿರುವ ವ್ಯಂಗ್ಯಚಿತ್ರದಲ್ಲಿ ‘ಕ್ರಮವನ್ನು ಕೈಗೊಳ್ಳುವುದು ಮಾತ್ರವಲ್ಲ,ಪೋಸ್ಟರ್‌ಗಳನ್ನೂ ಹಾಕುವ ಯೋಗಿಜಿ ಲಕ್ನೋದಲ್ಲಿ ಕುಳಿತಿದ್ದಾರೆ,ಹೀಗಾಗಿ ಅಲ್ಲಿಗೆ ಹೋದಾಗ ಎಚ್ಚರಿಕೆಯಿರಲಿ’ ಎಂದು ಓರ್ವ ಇನ್ನೋರ್ವ ವ್ಯಕ್ತಿಗೆ ಹೇಳುತ್ತಿದ್ದು,‘ಓ ಭಾಯಿ,ಲಕ್ನೋಕ್ಕೆ ಹೋಗುವಾಗ ಸ್ವಲ್ಪ ಜಾಗ್ರತೆಯಿರಲಿ ’ಎಂಬ ಅಡಿಬರಹವನ್ನು ನೀಡಲಾಗಿದೆ.

ಜು.26ರಂದು ಲಕ್ನೋಕ್ಕೆ ಭೇಟಿ ನೀಡಿದ್ದ ಟಿಕಾಯತ್,ಉ.ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಕಬ್ಬಿನ ಎಂಎಸ್‌ಪಿಯನ್ನು ಹೆಚ್ಚಿಸಲಾಗಿಲ್ಲ. ರೈತರ ಸ್ಥಿತಿ ಚೆನ್ನಾಗಿಲ್ಲ. ‘ನಾವು ಲಕ್ನೋವನ್ನು ದಿಲ್ಲಿಯನ್ನಾಗಿ ಪರಿವರ್ತಿಸುತ್ತೇವೆ. ದಿಲ್ಲಿಯಂತೆ ಇತರ ರಾಜ್ಯಗಳ ರಾಜಧಾನಿಗಳಲ್ಲೂ ಪ್ರತಿಭಟನೆಗಳು ನಡೆಯಲಿವೆ. ರೈತರ ಸಮಸ್ಯೆಗಳನ್ನು ಚರ್ಚಿಸಲು ಉ.ಪ್ರದೇಶದಾದ್ಯಂತ ಸಭೆಗಳನ್ನು ನಡೆಸಲಾಗುವುದು’ ಎಂದು ಹೇಳಿದ್ದರು. ತನ್ಮಧ್ಯೆ,ವಿವಾದಾತ್ಮಕ ವ್ಯಂಗ್ಯಚಿತ್ರದ ಕುರಿತು ಬಿಜೆಪಿ ವಿರುದ್ಧ ದಾಳಿ ನಡೆಸಿರುವ ಎಸ್‌ಪಿ,ಬಿಜೆಪಿಯು ನಮ್ಮ ರೈತರ ಬಗ್ಗೆ ಏನು ಯೋಚಿಸುತ್ತಿದೆ ಎನ್ನುವುದನ್ನು ವ್ಯಂಗ್ಯಚಿತ್ರವು ಸರಿಯಾಗಿ ತೋರಿಸಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News