ಕಳೆದ 5 ವರ್ಷಗಳಲ್ಲಿ ಶೌಚಗುಂಡಿ ಸ್ವಚ್ಛತೆ ವೇಳೆ ಯಾರೂ ಮೃತಪಟ್ಟಿಲ್ಲ: ಕೇಂದ್ರ ಸರಕಾರ

Update: 2021-07-29 17:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಶೌಚಗುಂಡಿ ಸ್ವಚ್ಛತೆಯ ವೇಳೆ  ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಕೇಂದ್ರ ಬುಧವಾರ ಹೇಳಿದೆ.

ಕಾಂಗ್ರೆಸ್ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ  ಎಲ್. ಹನುಮಂತಯ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಸಾಮಾಜಿಕ ನ್ಯಾಯ ಹಾಗೂ  ಸಬಲೀಕರಣ ಸಚಿವಾಲಯವು ರಾಜ್ಯಸಭೆಯಲ್ಲಿ ಈ ವಿಚಾರ ತಿಳಿಸಿದೆ.

ಫೆಬ್ರವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ 2020 ರ ಡಿಸೆಂಬರ್ 31 ರವರೆಗೆ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಶೌಚಗುಂಡಿಗಳನ್ನು ಸ್ವಚ್ಛ ಗೊಳಿಸುವಾಗ 340 ಜನರು ಸಾವನ್ನಪ್ಪಿದ್ದಾರೆ ಎಂದು ಸರಕಾರ ಹೇಳಿತ್ತು  ಎಂದು The Hindu ವರದಿ ಮಾಡಿದೆ.

2020 ರ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠಾವಲೆ, ಕಳೆದ ಮೂರು ವರ್ಷಗಳಲ್ಲಿ ಮಾನವರಿಂದ ಶೌಚಗುಂಡಿ ಸ್ವಚ್ಛಗೊಳಿಸುವಾಗ ಯಾರೂ ಸಾವನ್ನಪ್ಪಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ರಾಜ್ಯಗಳ ಮಾಹಿತಿಯ ಪ್ರಕಾರ, ಈ ಅವಧಿಯಲ್ಲಿ ಚರಂಡಿಗಳು ಮತ್ತು ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವಾಗ 282 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News