ಜಾರ್ಖಂಡ್ ನ್ಯಾಯಾಧೀಶರ ಸಾವು ಪ್ರಕರಣ: ಆಟೋ ಚಾಲಕ ಸಹಿತ ಇಬ್ಬರ ಬಂಧನ

Update: 2021-07-30 07:23 GMT

ರಾಂಚಿ, ಜು. 29: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಬುಧವಾರ ಬೆಳಗ್ಗೆ ವಾಕಿಂಗ್ ತೆರಳಿದ್ದ ಸಂದರ್ಭ ಉದ್ದೇಶಪೂರ್ವಕವಾಗಿ ಆಟೊ ರಿಕ್ಷಾ ಢಿಕ್ಕಿ ಹೊಡೆಸಿ ಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಅಪಘಾತಕ್ಕೂ ಕೆಲವು ಗಂಟೆಗಳ ಮುನ್ನ ಅಟೋ ಕಳವುಗೈದ ಚಾಲಕನು ಕೂಡ ಬಂಧಿತರಲ್ಲಿ ಸೇರಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಟೋ ರಿಕ್ಷಾ ಧನ್‌ಬಾದ್‌ನ ಮಹಿಳೆಯೋರ್ವರ ಹೆಸರಿನಲ್ಲಿ ನೋಂದಣಿಯಾಗಿದೆ. ಬೆಳಗ್ಗೆ ಸುಮಾರು 1 ಗಂಟೆಗೆ ಮಹಿಳೆ ಆಟೋ ರಿಕ್ಷಾ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಹೆಚ್ಚಿ ಮಾಹಿತಿ ಸಂಗ್ರಹಿಸಲು ಹಲವು ಪೊಲೀಸ್ ತಂಡಗಳನ್ನು ರೂಪಿಸಲಾಗಿದೆ ಎಂದು ಡಿಐಜಿ ಮಯೂರ್ ಪಟೇಲ್ ಕನ್ನಯ್ಯ ಲಾಲ್ ತಿಳಿಸಿದ್ದಾರೆ.

ಅಪಘಾತದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಟೋ ರಿಕ್ಷಾವೊಂದು ಉತ್ತಮ್ ಆನಂದ್ ಅವರಿಗೆ ಉದ್ದೇಶಪೂರ್ವಕವಾಗಿ ಹಿಂದಿನಿಂದ ಢಿಕ್ಕಿ ಹೊಡೆದಿರುವುದು ದಾಖಲಾಗಿದೆ. ಆನಂದ್ ಅವರು ಗಾಲ್ಪ್ ಮೈದಾನದ ಸಮೀಪದ ನಿರ್ಜನ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿರುವಾಗ ಆಟೋ ರಿಕ್ಷಾ ಢಿಕ್ಕಿ ಹೊಡೆಸಲಾಗಿದೆ. ಹಿರಾಪುರದ ನ್ಯಾಯಾಧೀಶರ ಕಾಲನಿಯಲ್ಲಿರುವ ಅವರ ಮನೆಯಿಂದ 500 ಮೀಟರ್‌ಗಳ ದೂರದಲ್ಲಿ ಈ ಘಟನೆ ನಡೆದಿದೆ.

ಪವನ್ ಪಾಂಡೆ ಎಂಬವರು ಉತ್ತಮ್ ಆನಂದ್ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮೊದಲಿಗೆ ನೋಡಿದ್ದಾರೆ. ಕೂಡಲೇ ಅವರನ್ನು ಸಾಹಿದ್ ನಿರ್ಮಲ್ ಮಹತೊ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿದ್ದಾರೆ. ಅಲ್ಲಿ ಅವರು ಚಿಕಿತ್ಸೆಯ ಸಂದರ್ಭ ಮೃತಪಟ್ಟಿದ್ದಾರೆ. ಆರಂಭದಲ್ಲಿ ಅವರು ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಸಿಸಿಟಿವಿ ದೃಶ್ಯಾವಳಿ ನೋಡಿದ ಬಳಿಕ ಪ್ರಕರಣವನ್ನು ಹತ್ಯೆಯ ಆಯಾಮದ ಬಗ್ಗೆ ಶಂಕಿಸಲಾಯಿತು.

ಜಾರ್ಖಂಡ್ ಹೈಕೋರ್ಟ್‌ನಿಂದ ಪರಿಶೀಲನೆ: ಸುಪ್ರೀಂ ಕೋರ್ಟ್

ಧನ್‌ಬಾದ್ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಹತ್ಯೆ ಪ್ರಕರಣವನ್ನು ಜಾರ್ಖಂಡ್ ಉಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ನ್ಯಾಯಾಧೀಶರ ಹತ್ಯೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿ ಸೂರ್ಯಕಾಂತ ಅವನ್ನು ಒಳಗೊಂಡ ಪೀಠದ ಗಮನಕ್ಕೆ ತಂದರು.

  ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ವಿ. ರಮಣ, ಜಾರ್ಖಂಡ್‌ನ ಮುಖ್ಯ ನ್ಯಾಯಮೂರ್ತಿ ಜೊತೆ ನಾನು ಮಾತನಾಡಿದ್ದೇನೆ. ಅಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ನಡೆಯುತ್ತಿರುವುದರಿಂದ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವ ಅಗತ್ಯ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News