ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣ: ಶುಕ್ರವಾರ ಕೇರಳಕ್ಕೆ ಕೇಂದ್ರದ ತಂಡ

Update: 2021-07-29 18:22 GMT

 ಹೊಸದಿಲ್ಲಿ, ಜು. 29: ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ದಿನನಿತ್ಯ ಏರಿಕೆಯಾಗುತ್ತಿರುವುದರಿಂದ ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೇರಳಕ್ಕೆ 6 ಸದಸ್ಯರ ತಂಡವೊಂದನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಯೋಜಿಸಿದೆ.

ರೋಗ ನಿಯಂತ್ರಣದ ರಾಷ್ಟ್ರೀಯ ಕೇಂದ್ರ (ಎನ್‌ಸಿಡಿಸಿ)ದ ನಿರ್ದೇಶಕ ಎಸ್.ಕೆ. ಸಿಂಗ್ ಅವರ ನೇತೃತ್ವದ ತಂಡ ಶುಕ್ರವಾರ ಕೇರಳಕ್ಕೆ ತಲುಪಲಿದೆ ಹಾಗೂ ಅತ್ಯಧಿಕ ಪಾಸಿಟಿವ್ ದರ ಇರುವ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

‘‘ಕೇಂದ್ರ ಸರಕಾರ ಎನ್‌ಸಿಡಿಸಿ ನಿರ್ದೇಶಕರ ನೇತೃತ್ವದ 6 ಸದಸ್ಯರ ತಂಡವನ್ನು ಕೇರಳಕ್ಕೆ ಕಳುಹಿಸಿ ಕೊಡುತ್ತಿದೆ. ಕೇರಳದಲ್ಲಿ ಈಗಲೂ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ನಿಯಂತ್ರಣದಲ್ಲಿ ರಾಜ್ಯಕ್ಕೆ ಈ ತಂಡ ನೆರವು ನೀಡಲಿದೆ’’ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಳಮಟ್ಟದ ಪರಿಸ್ಥಿತಿ ಪರಿಶೀಲಿಸಲು ಹಾಗೂ ಕೋವಿಡ್ ಹರಡುವುದನ್ನು ತಡೆಯಲು ಅಗತ್ಯವಿರುವ ಸಾರ್ವಜನಿಕ ಆರೋಗ್ಯ ಸಲಹೆಗಳನ್ನು ಶಿಫಾರಸು ಮಾಡಲು ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ತಂಡ ನಿಕಟವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News