ಪ್ರಧಾನಿ ಮೋದಿಯ ಉತ್ತರ ಪ್ರದೇಶ ಭಾಷಣದಲ್ಲಿನ ಅರ್ಧ ಸತ್ಯಗಳು ಮತ್ತು ಉತ್ಪ್ರೇಕ್ಷಿತ ಹೊಗಳಿಕೆಗಳು

Update: 2021-07-30 13:46 GMT

ಹೊಸದಿಲ್ಲಿ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಜುಲೈ 15ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ 30 ನಿಮಿಷ ಅವಧಿಯ ಭಾಷಣದಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತದ ಗುಣಗಾನ ಮಾಡಿದ್ದರು. ಅವರು ಹೇಳಿದ್ದರಲ್ಲಿ ಎಷ್ಟು ವಾಸ್ತವವಿದೆ ಹಾಗೂ ಎಷ್ಟು ಅರ್ಧಸತ್ಯಗಳಿವೆ ಎಂಬುದನ್ನು Altnews.in ಪರಾಮರ್ಶಿಸಿದೆ.

1. ಉತ್ತರ ಪ್ರದೇಶ ದೇಶದಲ್ಲಿಯೇ ಗರಿಷ್ಠ ಕೋವಿಡ್ ಪರೀಕ್ಷೆ ನಡೆಸುತ್ತಿದೆ ಹಾಗೂ ಲಸಿಕೆ ನೀಡಿಕೆಯಲ್ಲೂ ರಾಜ್ಯ ಮುಂದಿದೆ ಎಂದು ಪ್ರಧಾನಿ ಹೇಳಿದ್ದರು.

ವೀಡಿಯೋ ಕ್ಲಿಪ್‌ ವೀಕ್ಷಿಸಿ

covid19india.org ಪ್ರಕಾರ ಉತ್ತರ ಪ್ರದೇಶ ಗರಿಷ್ಠ ಕೋವಿಡ್ ಪರೀಕ್ಷೆಗಳನ್ನು ನಡೆಸಿದೆ, ಆದರೆ ಈ ರಾಜ್ಯ ದೇಶದಲ್ಲಿಯೇ ಗರಿಷ್ಠ ಜನಸಂಖ್ಯೆಯಿರುವ ರಾಜ್ಯವಾಗಿದೆ. ಅಂತೆಯೇ ಕೋವಿಡ್ ಲಸಿಕೆ (ಮೊದಲ ಮತ್ತು ಎರಡನೇ ಡೋಸ್) ನೀಡಿಕೆಯಲ್ಲೂ ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜುಲೈ 26ರ ಅಂಕಿಅಂಶಗಳಂತೆ ರಾಜ್ಯ ಮುಂದಿದೆ. ಆದರೆ  ತಲಾ ಲಕ್ಷಕ್ಕೆ ಪೂರ್ಣಪ್ರಮಾಣದ ಲಸಿಕೆ ಪಡೆದ ಜನರಿಗೆ ಹೋಲಿಸಿದಾಗ ಬೇರೆಯೇ ಚಿತ್ರಣ ಮೂಡುತ್ತದೆ.

ದೇಶದ ಆಧಾರ್ ಕಾರ್ಡುದಾರರ ಸಂಖ್ಯೆಯನ್ನು ಆಧರಿಸಿ ತಲಾ ಲಕ್ಷ ಜನಸಂಖ್ಯೆಗೆ ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂದು  ಆಲ್ಟ್ ನ್ಯೂಸ್ ಪರಿಶೀಲಿಸಿದಾಗ ತಲಾ ಲಕ್ಷಕ್ಕೆ 3,516.89 ಮಂದಿಗೆ ಉತ್ತರ ಪ್ರದೇಶದಲ್ಲಿ ಎರಡೂ ಡೋಸ್ ಲಸಿಕೆ ದೊರಕಿದ್ದು ಇದು ದೇಶದಲ್ಲಿಯೇ ಕನಿಷ್ಠ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸರಾಸರಿ ತಲಾ ಲಕ್ಷಕ್ಕೆ 7,575.84 ಆಗಿದೆ.

2. ಉತ್ತರ ಪ್ರದೇಶದಲ್ಲಿ  ನಾಲ್ಕು ವರ್ಷಗಳ ಹಿಂದೆ ಕೇವಲ ಒಂದು ಡಜನ್ ಮೆಡಿಕಲ್ ಕಾಲೇಜುಗಳಿದ್ದವು, ಈ ಸಂಖ್ಯೆ ಈಗ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದರು.

ವೀಡಿಯೋ ಕ್ಲಿಪ್‌ ವೀಕ್ಷಿಸಿ

 ಆದಿತ್ಯನಾಥ್ ಅವರು 2017ರಲ್ಲಿ ಅಧಿಕಾರ ಸ್ವೀಕರಿಸಿದ್ದರು. ಕೇಂದ್ರ ಆರೋಗ್ಯ ಸಚಿವಾಲಯದ 2016 ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 38 ಮೆಡಿಕಲ್ ಕಾಲೇಜುಗಳಿದ್ದವು. 2021ರಲ್ಲಿ ಈ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಪ್ರಧಾನಿ ಹೇಳಿದ್ದನ್ನು ಗಣನೆಗೆ ತೆಗೆದುಕೊಂಡರೆ, ನಾಲ್ಕು ಪಟ್ಟು ಅಧಿಕವೆಂದರೆ ಈಗ ರಾಜ್ಯದಲ್ಲಿ 152 ಕಾಲೇಜುಗಳಿರಬೇಕಿತ್ತು.

3. ಜಲಜೀವನ್ ಮಿಷನ್‌ನಲ್ಲಿ ಉತ್ತರಪ್ರದೇಶ ರಾಜ್ಯ ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದರು.

ಜಲಜೀವನ್ ಮಿಷನ್ ವೆಬ್‌ಸೈಟ್ ಪ್ರಕಾರ ರಾಜ್ಯದಲ್ಲಿ  ಒಟ್ಟು ಕುಟುಂಬಗಳಿಗೆ ಹೋಲಿಸಿದಾಗ ನಳ್ಳಿ ನೀರು ಸಂಪರ್ಕವಿರುವ ಕುಟುಂಬಗಳ ಸಂಖ್ಯೆ 1.96%ರಿಂದ 11.99%ಗೆ ಏರಿಕೆಯಾಗಿದೆ. ಆದರೆ ಬಿಹಾರದಲ್ಲಿ ಈ ಪ್ರಮಾಣ 1.84%ರಿಂದ 85.74%ಗೆ ಏರಿಕೆಯಾಗಿದೆ.

4. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹೊಗಳಿದ ಪ್ರಧಾನಿ, ಈಗ ರಾಜ್ಯದ ಯೋಗಿ ಆಡಳಿತದಲ್ಲಿ  ಮಹಿಳೆಯರು ಸುರಕ್ಷಿತ, ನಮ್ಮ ಸೋದರಿಯರು ಹಾಗೂ ಪುತ್ರಿಯರಿಗೆ ಕಿರುಕುಳ ನೀಡುವವರು ಈಗ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತಿದ್ದಾರೆ ಎಂದಿದ್ದರು.

 ರಾಜ್ಯದಲ್ಲಿ ನಡೆದ ಹತ್ರಸ್ ಸಾಮೂಹಿಕ ಅತ್ಯಾಚಾರ ಮತ್ತು ಉನ್ನಾವೋ ಪ್ರಕರಣ  ಇಡೀ ದೇಶದಲ್ಲಿಯೇ ಸುದ್ದಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ(2019) ಅಂಕಿಅಂಶಗಳಂತೆ ದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಪ್ರಕರಣದಲ್ಲಿ ಉತ್ತರ ಪ್ರದೇಶದ ಪಾಲು ಗರಿಷ್ಠ 14.7% ಆಗಿದೆ.

ಕೃಪೆ: altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News