ಬಂಟ್ವಾಳ: ಎಂ.ಆರ್.ಪಿ.ಎಲ್. ಪೈಪ್ ಕೊರೆದು ಡೀಸೆಲ್‌ ಕಳವು; ಆರೋಪಿ ಪರಾರಿ

Update: 2021-07-30 17:11 GMT

ಬಂಟ್ವಾಳ: ಭೂಮಿಯಡಿ ಹಾದು ಹೋಗಿರುವ ಎಂ.ಆರ್.ಪಿ.ಎಲ್.ಗೆ ಸೇರಿದ ಪೈಪ್ ಅನ್ನು ಕೊರೆದು ಡೀಸೆಲ್‌ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ತಾಲೂಕಿನ ಅರಳ ಗ್ರಾಮದ ಸೋರ್ನಾಡು ಎಂಬಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸೋರ್ನಾಡು ಸಮೀಪದ ಅರ್ಬಿ ಎಂಬಲ್ಲಿನ ನಿವಾಸಿ, ಆರೋಪಿ ಐವನ್ ಎಂಬಾತ ತನಗೆ ಸೇರಿದ ಖಾಸಗಿ ಜಮೀನಿನ ರಸ್ತೆಯಲ್ಲಿ ಹಾದು ಹೋಗಿರುವ ಪೈಪ್ ಅನ್ನು ಕೊರೆದು ಡೀಸೆಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸುಮಾರು 20 ಅಡಿ ಆಳದಲ್ಲಿ ಹಾದು ಹೋಗಿರುವ ಡೀಸೆಲ್ ಸಾಗಾಟದ ಪೈಪ್ ಅನ್ನು ಅಗೆದು ಆ ಪೈಪ್ ಗೆ ಇನ್ನೊಂದು ಪೈಪ್ ಅಳವಡಿಸಿ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ಗೇಟ್ ವಾಲ್ ಅಳವಡಿಸಿ ಟ್ಯಾಪ್ ಮೂಲಕ ಡೀಸೆಲ್ ಕಳ್ಳತನ ಮಾಡಲಾಗುತ್ತಿತ್ತು. ಬಳಿಕ ಆರೋಪಿ ಕಳವು ಮಾಡಿದ ಡೀಸೆಲ್‌ ಅನ್ನು ವಾಹನಕ್ಕೆ ತುಂಬಿಸಿ ಮಾರಾಟ ಮಾಡುತ್ತಿದ್ದ ಎಂದು ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಕಂಪೆನಿಯಲ್ಲಿ ಕೆಲವು ದಿನಗಳಿಂದ ಪೈಪ್ ಲೈನ್ ನಲ್ಲಿ ಸಾಗುತ್ತಿದ್ದ ಡಿಸೇಲ್ ನ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಸ್ವತಃ ಕಂಪೆನಿಯವರು ಮಂಗಳೂರು ಕಮೀಷನರ್ ಗೆ ದೂರು ನೀಡಿದ್ದರು. ಬಳಿಕ ಕಂಪೆನಿಯ ಅಧಿಕಾರಿಗಳು ಈ ಬಗ್ಗೆ ಕಂಪೆನಿಯ ತಂತ್ರಜ್ಞಾನ ಯಂತ್ರದಲ್ಲಿ ಪರಿಶೀಲನೆ ನಡೆಸಿದಾಗ ಡೀಸೆಲ್ ಸೋರಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಯವರು ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. 

ದೂರಿನ ಮೇರೆಗೆ ಪೊಲೀಸರು ರಸ್ತೆಯನ್ನು ಅಗೆದು ಪರಿಶೀಲನೆ ನಡೆಸಿದಾಗ ಪೈಪ್ ಕೊರೆದು ಡೀಸೆಲ್‌ ಕಳವು ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News