ಮಹಿಳೆಯರನ್ನು ಕೀಳಾಗಿ ತೋರಿಸುವ ಆ್ಯಪ್ ಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿವಸೇನೆ ಆಗ್ರಹ
ಮುಂಬೈ, ಜು.30: ಮಹಿಳೆಯರನ್ನು ಗುರಿಯಾಗಿಸಿಕೊಂಡು ಮತ್ತು ಅವರನ್ನು ಕೀಳಾಗಿ ತೋರಿಸುವ ಆ್ಯಪ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಸೇನೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಈ ರೀತಿಯ ಪೀಡೆಗಳನ್ನು ಸಹಿಸಲು ಸಾಧ್ಯವಿಲ್ಲ. ಕೆಲ ತಿಂಗಳ ಹಿಂದೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ನಿರ್ದಿಷ್ಟ ಸಮುದಾಯದ ಮಹಿಳೆಯೊಬ್ಬರನ್ನು ನೇರಪ್ರಸಾರದ ಮೂಲಕ ಹರಾಜಿಗಿಡಲಾಗಿತ್ತು. ಮಹಿಳೆಯ ಅಂಗಸೌಷ್ಟವದ ಆಧಾರದಲ್ಲಿ ಅವರ ಬೆಲೆಯನ್ನು ನಿಗದಿಗೊಳಿಸಿದ್ದು ಅಸಭ್ಯ ಭಾಷೆಯಲ್ಲಿ ವೀಕ್ಷಕ ವಿವರಣೆಯೂ ಇತ್ತು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಗೆ ಬರೆದಿರುವ ಪತ್ರದಲ್ಲಿ ಶಿವಸೇನೆ ಸಂಸದೆ ಮತ್ತು ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಇನ್ನೊಂದು ಆ್ಯಪ್ ನಲ್ಲಿ ಪತ್ರಕರ್ತೆಯರ ಸಹಿತ ಹಲವು ಮಹಿಳೆಯರ ಚಿತ್ರಗಳನ್ನು ಅಪ್ಲೋಡ್ ಮಾಡಿ ಅವಮಾನಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ದಿಲ್ಲಿ ಮತ್ತೊ ನೋಯ್ಡಾದ ಪೊಲೀಸರು ಪ್ರಕರಣ ದಾಖಲಿಸಿದ್ದರೂ, ಕಠಿಣ ಕಾಯ್ದೆ ಇರದ ಕಾರಣ ಇಂತಹ ಕೃತ್ಯಗಳು ಮುಂದುವರಿದಿವೆ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.