ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ: 70,000 ಅಭ್ಯರ್ಥಿಗಳಿಂದ ಶೇ.95ಕ್ಕೂ ಹೆಚ್ಚು ಅಂಕ ಗಳಿಕೆ!

Update: 2021-07-30 18:17 GMT

ಹೊಸದಿಲ್ಲಿ,ಜು.30: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯು 12ನೇ ತರಗತಿಯ ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಿದ್ದು,ಶೇ.99.37ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವುದರೊಂದಿಗೆ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಬಾಲಕಿಯರು ಶೇ.0.54 ಅಂತರದೊಂದಿಗೆ ಮೇಲುಗೈ ಸಾಧಿಸಿದ್ದಾರೆ.


ಕಳೆದ ವರ್ಷದ ಶೇ.88.78ಕ್ಕೆ ಹೋಲಿಸಿದರೆ ಈ ವರ್ಷ ತೇರ್ಗಡೆಗೊಂಡವರ ಪ್ರಮಾಣದಲ್ಲಿ ಸುಮಾರು ಶೇ.10ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಬಾಲಕಿಯರು ಮತ್ತು ಬಾಲಕರ ನಡುವಿನ ತೇರ್ಗಡೆ ಅಂತರ ಸುಮಾರು ಶೇ.6ರಷ್ಟಿತ್ತು. ಕೋವಿಡ್-2ನೇ ಅಲೆಯ ಹಿನ್ನೆಲೆಯಲ್ಲಿ ಈ ವರ್ಷ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಪರ್ಯಾಯ ಮೌಲ್ಯಮಾಪನ ನೀತಿಯ ಆಧಾರದಲ್ಲಿ ಸಿಬಿಎಸ್ಇ ಫಲಿತಾಂಶಗಳನ್ನು ಪ್ರಕಟಿಸಿದೆ.

ಒಟ್ಟು 13.04 ಲಕ್ಷ ಅಭ್ಯರ್ಥಿಗಳ ಪೈಕಿ 12.96 ಲ.ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಕಳೆದ ವರ್ಷ 38,686 ವಿದ್ಯಾರ್ಥಿಗಳು ಶೇ.95ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದರೆ ಈ ವರ್ಷ ಅವರ ಸಂಖ್ಯೆ 70,000ಕ್ಕೆ ಏರಿಕೆಯಾಗಿದೆ. ಆದರೆ ಶೇ.90 ಮತ್ತು ಶೇ.95ರ ನಡುವೆ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ 1,57,934ರಿಂದ 1,50,152ಕ್ಕೆ ಇಳಿದಿದೆ. ತೇರ್ಗಡೆಗೊಂಡವರಲ್ಲಿ ಸಿಬಿಎಸ್ಇಗೆ ಹೊರತಾದ ಪರೀಕ್ಷಾ ಮಂಡಳಿಗಳ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ.

ಭಿನ್ನ ಸಾಮರ್ಥ್ಯದ 129 ಮಕ್ಕಳು ಶೇ.95ಕ್ಕೂ ಅಧಿಕ ಅಂಕಗಳನ್ನು ಮತ್ತು 400 ಮಕ್ಕಳು ಶೇ.90ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ವಿದೇಶಗಳಲ್ಲಿಯ ಸಿಬಿಎಸ್ಇ ಸಂಯೋಜಿತ ಶಾಲೆಗಳ ಶೇ.99.92ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

ಕಳೆದ ವರ್ಷ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡು ಕಂಪಾರ್ಟ್ಮೆಂಟ್ಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸಂಖ್ಯೆ 87,650 ಆಗಿದ್ದರೆ,ಈ ವರ್ಷ ಕೇವಲ 6,149 ವಿದ್ಯಾರ್ಥಿಗಳು ಈ ಗುಂಪಿಗೆ ಸೇರಿದ್ದಾರೆ.

ಕಂಪಾರ್ಟ್ಮೆಂಟ್(ಪೂರಕ) ಪರೀಕ್ಷೆಯನ್ನು ಆ.16ರಿಂದ ಸೆ.15ರ ನಡುವೆ ನಡೆಸಲಾಗುವುದು. ನಿಖರ ದಿನಾಂಕಗಳನ್ನು ನಂತರದಲ್ಲಿ ಪ್ರಕಟಿಸಲಾಗವುದು ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸಂಯಮ ಭಾರದ್ವಾಜ್ ತಿಳಿಸಿದ್ದಾರೆ.
                                   
ಕಟ್-ಆಫ್ ಮಿತಿ ಏರಿಕೆ ಸಾಧ್ಯತೆ

12ನೇ ತರಗತಿಯ ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಕಳೆದೆರಡು ವರ್ಷಗಳಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದ್ದು,ಕಾಲೇಜುಗಳಲ್ಲಿ ಪ್ರವೇಶಕ್ಕೆ ಕಟ್-ಆಫ್ ಅಥವಾ ಕನಿಷ್ಠ ಅಂಕಗಳ ಮಿತಿ ಈ ಹಿಂದೆಂದೂ ಕಾಣದ ಎತ್ತರವನ್ನು ತಲುಪುವ ಸಾಧ್ಯತೆಯಿದೆ.

ಎರಡು ವರ್ಷಗಳ ಹಿಂದೆ,ಕೋವಿಡ್ ಸಾಂಕ್ರಾಮಿಕವು ಪರೀಕ್ಷಾ ವ್ಯವಸ್ಥೆಯ ಮೇಲೆ ದಾಳಿಯಿಡುವ ಮುನ್ನ ಶೇ.1.5ರಷ್ಟು ಅಂದರೆ ಕೇವಲ 17,693 ವಿದ್ಯಾರ್ಥಿಗಳು ಶೇ.95ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದು,ತಮ್ಮ ಆಯ್ಕೆಯ ಕಾಲೇಜುಗಳನ್ನು ಸೇರುವ ಉತ್ತಮ ಅವಕಾಶ ಅವರದಾಗಿತ್ತು. ಈ ವರ್ಷ ಈ ಗುಂಪಿನ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ಶೇ.300ರಷ್ಟು ಏರಿಕೆಯಾಗಿ 70,000ಕ್ಕೆ ತಲುಪಿದೆ. ಅಂದರೆ ಶೇ.5.4ರಷ್ಟು ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ.

ಒಟ್ಟು 2.2 ಲಕ್ಷ ಅಂದರೆ ಶೇ.17ರಷ್ಟು ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಇದು 2019ರಲ್ಲಿ ಈ ಗುಂಪಿಗೆ ಸೇರಿದ್ದ 94,299 ವಿದ್ಯಾರ್ಥಿಗಳ ದುಪ್ಪಟ್ಟಿಗೂ ಹೆಚ್ಚಾಗಿದೆ.

ಈ ವರ್ಷ ಸಾಂಕ್ರಾಮಿಕದಿಂದಾಗಿ 12ನೇ ತರಗತಿಯ ಪರೀಕ್ಷೆಗಳು ಸಂಪೂರ್ಣವಾಗಿ ರದ್ದುಗೊಂಡಿದ್ದು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡ ಸೂತ್ರವನ್ನು ಬಳಸಿ ಫಲಿತಾಂಶಗಳನ್ನು ಸಿದ್ಧಪಡಿಸಲಾಗಿದೆ. ಈ ವಿಭಿನ್ನ ವೌಲ್ಯಮಾಪನ ವ್ಯವಸ್ಥೆಯಿಂದಾಗಿ ಈ ವರ್ಷ ಉನ್ನತ ಶೇ.0.1ರಷ್ಟು ವಿದ್ಯಾರ್ಥಿಗಳ ಮೆರಿಟ್ ಲಿಸ್ಟ್ ಪ್ರಕಟಿಸದಿರಲು ಮತ್ತು ಮೆರಿಟ್ ಸರ್ಟಿಫಿಕೇಟ್ಗಳನ್ನು ನೀಡದಿರಲು ಸಿಬಿಎಸ್ಇ ನಿರ್ಧರಿಸಿದೆ.

1,060 ಹೊಸ ಶಾಲೆಗಳ ಫಲಿತಾಂಶವಿನ್ನೂ ಸಿದ್ಧತೆ ಹಂತದಲ್ಲಿದ್ದು,ಕೆಲವು ಶಾಲೆಗಳು ಮಾಡರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಅಂದರೆ 65,184 ವಿದ್ಯಾರ್ಥಿಗಳ ಫಲಿತಾಂಶ ವಿಳಂಬಗೊಂಡಿದ್ದು,ಆ.5ರೊಳಗೆ ಪ್ರಕಟಗೊಳ್ಳಲಿದೆ.

60,443 ಖಾಸಗಿ ವಿದ್ಯಾರ್ಥಿಗಳು ಮತ್ತು ಟ್ಯಾಬ್ಯುಲೇಷನ್ ಸೂತ್ರದಂತೆ ತಮಗೆ ನೀಡಲಾಗಿರುವ ಅಂಕಗಳ ಬಗ್ಗೆ ಅತೃಪ್ತಿಗೊಂಡಿರುವ ವಿದ್ಯಾರ್ಥಿಗಳಿಗಾಗಿ ಸಿಬಿಎಸ್ಇ ಆ.16 ಮತ್ತು ಸೆ.15ರ ನಡುವೆ ಆಫ್ಲೈನ್ ಪರೀಕ್ಷೆಗಳನ್ನು ನಡೆಸಲಿದೆ. ಇವರೊಂದಿಗೆ 6,149 ವಿದ್ಯಾರ್ಥಿಗಳೂ ತಮ್ಮ ಪೂರಕ ಪರೀಕ್ಷೆಯನ್ನು ಬರೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News