×
Ad

ವಿಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ: ರಾಜ್ಯಸಭೆ ಸೋಮವಾರಕ್ಕೆ ಮುಂದೂಡಿಕೆ

Update: 2021-07-30 23:57 IST

ಹೊಸದಿಲ್ಲಿ, ಜು.30: ಪೆಗಾಸಸ್ ಗೂಢಚಾರಿಕೆ ಪ್ರಕರಣ, ಕೃಷಿ ಕಾಯ್ದೆ ಮತ್ತು ಬೆಲೆಯೇರಿಕೆ ವಿರೋಧಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿದಿರುವಂತೆಯೇ, ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಬೆಳಿಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಸರಕಾರ ‘ಲಿಮಿಟೆಡ್ ಲಯಬಿಲಿಟಿ ಪಾರ್ಟ್ನರ್ಶಿಪ್ (ಅಮೆಂಡ್ಮೆಂಟ್) ಬಿಲ್ 2021 ಮತ್ತು ಡೆಪೊಸಿಟ್ ಇನ್ಷೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಅಮೆಂಡ್ಮೆಂಟ್) ಬಿಲ್ 2021 ಅನ್ನು ಮಂಡಿಸಿತು. ಜತೆಗೆ, ತೆಂಗು ಅಭಿವೃದ್ಧಿ ಮಂಡಳಿ(ತಿದ್ದುಪಡಿ) ಮಸೂದೆ, 2021ನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದರು. ‌

ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಘೋಷಣೆಯ ಮಧ್ಯೆಯೇ ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಬಳಿಕ ಸದನವನ್ನು 11 ಗಂಟೆಯವರೆಗೆ ಮುಂದೂಡಲಾಯಿತು. ಪ್ರಶ್ನೋತ್ತರ ಅವಧಿಗೆ ಸದನದ ಕಲಾಪ ಮತ್ತೆ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ಹಲವು ಸದಸ್ಯರು ಸದನದ ಬಾವಿಗೆ ನುಗ್ಗಿ ಸರಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. 

ಈ ಮಧ್ಯೆ ಕಲಾಪಪಟ್ಟಿಯಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಸಂಬಂಧಿಸಿದ ಸಚಿವರು ಉತ್ತರಿಸಲು ಆರಂಭಿಸಿದಾಗ, ವಿಪಕ್ಷ ಸದಸ್ಯರ ಘೋಷಣೆ ಹೆಚ್ಚಿತು. ಗದ್ದಲ ಹೆಚ್ಚಾದಾಗ ಸದನವನ್ನು ಮಧ್ಯಾಹ್ನ 2:30ರವರೆಗೆ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ ಸದನದ ಘನತೆ ಮತ್ತು ಸಭ್ಯತೆಯನ್ನು ಕಾಪಾಡುವಂತೆ ರಾಜ್ಯಸಭೆ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮನವಿ ಮಾಡಿಕೊಂಡರು. ಆದರೆ ವಿಪಕ್ಷ ಸದಸ್ಯರ ಘೋಷಣೆ, ಪ್ರತಿಭಟನೆ ಮುಂದುವರಿದಾಗ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News