ಯುಪಿಸಿಎಲ್‍ನಿಂದ ಕಲ್ಲಿದ್ದಲು ಮಿಶ್ರಿತ ನೀರು ಸ್ಥಳೀಯರ ಆರೋಪ: ಪರಿಸರ ಅಧಿಕಾರಿಗಳು ಭೇಟಿ

Update: 2021-07-31 12:09 GMT

ಪಡುಬಿದ್ರಿ : ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಪರಿಸರದಲ್ಲಿ ಅದಾನಿ ಒಡೆತನದ ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ವಿದ್ಯುತ್ ಉತ್ಪಾದನಾ ಕಂಪೆನಿಯು ಕಲ್ಲಿದ್ದಲು ಮಿಶ್ರಿತ ನೀರನ್ನು ಹೊರಗೆ ಬಿಡುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಹಾನಿ ಉಂಟಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಶನಿವಾರ ಉಡುಪಿ ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ರಾತ್ರಿ ಸುರಿದ ಮಳೆಯ ಸಂದರ್ಭದಲ್ಲಿ ಉಳ್ಳೂರಿನ ಕರಿಯ ಶೆಟ್ಟಿ ಅವರ ಅವರ ಮನೆ ಸಮೀಪದ ತೋಡಿಗೆ ಕಲ್ಲಿದ್ದಲು ಮಿಶ್ರಿತ ಕಪ್ಪು ನೀರನ್ನು ಬಿಡಲಾಗುತ್ತದೆ ಎಂಬ ದೂರಿನ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪರಿಸರ ಇಲಾಖೆಯ ಅಧಿಕಾರಿ ವಿಜಯ ಹೆಗ್ಡೆ ನೇತೃತ್ವದ ತಂಡ ಅನಿತಾ ಶೆಟ್ಟಿ, ಕರಿಯ ಶೆಟ್ಟಿ ಅವರ ಕೃಷಿ ಭೂಮಿ, ನೀರು ಹರಿಯುವ ತೋಡು, ಕೊಳಚೂರು ಗಣೇಶ್ ರಾವ್ ಅವರ ಮನೆಯ ಜಾನುವಾರುಗಳು, ಗ್ರಾಮ ಪಂ. ಅಧ್ಯಕ್ಷ ಜಯಂತ್ ಕುಮಾರ್, ವಿಮಲಾ ಮುಗ್ಗೇರ್ತಿ  ಅವರ ಮನೆಯ ಬಾವಿಯ ನೀರು  ಹಾಗೂ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಪರಿಸರ ಇಲಾಖೆಯ ಅಧಿಕಾರಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಕಲೆಹಾಕಿತು.

ಹೈನುಗಾರಿಕೆ ನಡೆಸುತಿದ್ದ ಕೊಳಚೂರು ಗಣೇಶ್ ರಾವ್ ಅವರ ಮನೆಗೆ ಭೇಟಿ ನೀಡಿ ಅಧಿಕಾರಿಗಳು ಅವರು ಸಾಕುತಿದ್ದ 30 ಜಾನುವಾರುಗಳ ಪೈಕಿ ಐದು ಜಾನುವಾರು ಅನಾರೋಗ್ಯದಿಂದ ಸತ್ತು ಹೋಗಿದ್ದು, ಇನ್ನೂ ಒಂದು ರೋಗದಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು.

ಉಳ್ಳೂರು ಪರಿಸರದಲ್ಲಿ ಹೆಚ್ಚಿನವರು ಕೃಷಿಕರಾಗಿದ್ದಾರೆ. ಈ ಪರಿಸರದ ಜನರು ಹಲವು ವರ್ಷಗಳಿಂದ ಕೃಷಿ ಮಾಡುತಿದ್ದೇವೆ. ಕಳೆದ ಹತ್ತು ವರ್ಷಗಳಿಂದ ನಮಗೆ ಸಮಸ್ಯೆ ಆಗಿದೆ. ಇದರಿಂದ ಕೃಷಿ ಚಟುವಟಿಕೆ ಆಗದೆ ಗದ್ದೆಗಳು ಹಡೀಲು ಬಿದ್ದಿವೆ. ಜೋರಾಗಿ ಮಳೆ ಬಂದಾಗ ಕಲ್ಲಿದ್ದಲು ಮಿಶ್ರಿತ ನೀರನ್ನು ಹೊರಗೆ ಬಿಡಲಾಗುತ್ತದೆ. ಜನರ  ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಜಾನುವಾರುಗಳೂ ಅನಾರೋಗ್ಯ ಪೀಡಿತ ವಾಗಿದೆ. ಹತ್ತು ವರ್ಷಗಳಿಂದ ಈ ಬಗ್ಗೆ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ನರಕ ಯಾತನೆಯನ್ನು ಯಾರು ಗಮನಹರಿ ಸುತಿಲ್ಲ ಎಂದು ಸ್ಥಳೀಯರು  ದೂರಿದರು. ಅಲ್ಲದೆ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಂಪೆನಿ ನಿರಾಕರಣೆ: ಕೂಡಲೇ ಪರಿಸರ ಇಲಾಖೆಯ ಅಧಿಕಾರಿ ವಿಜಯ್ ಹೆಗ್ಡೆ  ಕಂಪೆನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳಾದ ಚೆನ್ನಬಸವ ಹಾಗೂ ನರೇಂದ್ರ ಮಾಂಝಿ ಅವರೊಂದಿಗೆ ಕಲ್ಲಿದ್ದಲು ಮಿಶ್ರಿತ ನೀರು ಬಿಡುವ ಬಗ್ಗೆ ಸ್ಥಳೀಯರು ವಿಚಾರಿಸಿದಾಗ ಕಂಪೆನಿಯ ಒಳಗಿಂದ ಕಲ್ಲಿದ್ದಲು ಮಿಶ್ರಿತ ನೀರು ಹೊರಗೆ ಬಿಡುವುದನ್ನು ನಿರಾಕರಿಸಿದರು. ಕಳೆದ ರಾತ್ರಿ ಮಳೆ ಬಂದಾಗ ನೀರು ಬಿಡುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿರುವುದನ್ನು ಸ್ಥಳೀಯರು ತೋರಿಸಿ ಅಸಮಾಧಾನ ವ್ಯಕ್ತಪಡಿಸಿದರು. 

ಗ್ರಾಪಂ ಅಧ್ಯಕ್ಷ ಜಯಂತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿ ಕಂಪೆನಿ ನೀರು ಬಿಡುತ್ತಿರುವ ಬಗ್ಗೆ ಸಾಕ್ಷ್ಯ  ಸಮೇತ ಸಾಬೀತಾಗಿದೆ. ಮತ್ತೆ ಇದನ್ನು ಮುಂದುವರಿಸಿದಲ್ಲಿ ಸೂಕ್ತ ಕಠಿಣ ಕಾನೂನು ಕ್ರಮವನ್ನು ಕಂಪೆನಿ ವಿರುದ್ಧ ಜರಗಿಸುವುದಾಗಿ ಎಚ್ಚರಿಸಿದರು.

ಪರಿಸರ ಇಲಾಖೆಯ ಉಪಪರಿಸರ ಅಧಿಕಾರಿ ಪ್ರಮೀಳಾ, ಸಹಾಯಕ ಅಧಿಕಾರಿ ವಿವೇಕ್, ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ ಶೆಟ್ಟಿಗಾರ್, ಶೋಭಾ ಶೆಟ್ಟಿ, ಮಾಜಿ ಸದಸ್ಯ ಸತೀಶ್ ಗುಡ್ಡಚ್ಚಿ ಈ ಸಂದರ್ಭದಲ್ಲಿದ್ದರು.

ರಾತ್ರಿಯ ವೇಳೆ ಕಲ್ಲಿದ್ದಲು ಮಿಶ್ರಿತ ನೀರು ಬಿಡುವ ಬಗ್ಗೆ ಹಾಗೂ ಯುಪಿಸಿಎಲ್ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಭೇಟಿ ನೀಡಿದ್ದೇವೆ. ಯೋಜನಾ ಪ್ರದೇಶದ ಸುತ್ತಮುತ್ತಲೂ ಪರಿಶೀಲನೆ ನಡೆಸಲಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದಿದ್ದೇವೆ. ಬಾವಿಯ ಕುಡಿಯುವ ನೀರು ಕಲುಷಿತ ಆಗಿದೆ  ಎಂಬ ದೂರಿನ ಹಿನ್ನಲೆಯಲ್ಲಿ ನೀರಿನ ಪರೀಕ್ಷೆ ನಡೆಸಲು ಸಂಗ್ರಹಿಸಿದ್ದೇವೆ ಎಂದು ಪರಿಸರ ಇಲಾಖೆಯ ಅಧಿಕಾರಿ ವಿಜಯ್ ಹೆಗ್ಡೆ ತಿಳಿಸಿದರು.

ಗ್ರಾಮ ಪಂ. ಅಧ್ಯಕ್ಷ ಜಯಂತ್ ಕುಮಾರ್ ಮಾತನಾಡಿ, ಕಂಪೆನಿಯು ಹಲವು ಸಮಯದಿಂದ ಕಲ್ಲಿದ್ದಲು  ಮಿಶ್ರಿತ ನೀರನ್ನು ಹೊರ ಬಿಡುವ ಬಗ್ಗೆ ಸ್ಥಳೀಯರು ದೂರಿದ್ದರು. ಈ ಬಗ್ಗೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದು ಪರಿಸರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕಂಪೆನಿ ಮತ್ತೆ ಕಲ್ಲಿದ್ದಲು ಮಿಶ್ರಿತ ನೀರನ್ನು ಹೊರಗೆ ಬಿಟ್ಟಲ್ಲಿ ಸೂಕ್ತ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡುವುದಾಗಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News