ಬಿಆರ್‌ಎಸ್ ಆಸ್ಪತ್ರೆಗಾಗಿ ತೋಡಲಾದ ಗುಂಡಿ ಮುಚ್ಚಲು ನಿರ್ಣಯ

Update: 2021-07-31 14:04 GMT

ಉಡುಪಿ, ಜು.31: ನಗರದ ಕೆ.ಎಂ.ಮಾರ್ಗದಲ್ಲಿ ಜಲಾಶಯದಂತೆ ಆಗಿರುವ ಬಿ.ಆರ್.ಶೆಟ್ಟಿ ಸಮೂಹ ಸಂಸ್ಥೆಯಿಂದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ತೋಡಲಾದ 40 ಅಡಿ ಆಳದ ಗುಂಡಿಯನ್ನು 15 ದಿನದೊಳಗೆ ಮುಚ್ಚಲು ಅಥವಾ ಅದರ ಖರ್ಚನ್ನು ನಗರಸಭೆಗೆ ಭರಿಸುವಂತೆ ಸಂಸ್ಥೆಗೆ ನೋಟಿಸ್ ಜಾರಿ ಮಾಡುವ ಕುರಿತು ಶನಿವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದು ಕೊಳ್ಳಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಹಾಜಿ ಅಬ್ದುಲ್ಲಾ ದಾನವಾಗಿ ನೀಡಿರುವ ಕೋಟ್ಯಂತರ ರೂ. ಬೆಲೆಬಾಳುವ 4 ಎಕರೆ ಜಾಗವನ್ನು ಹಿಂದಿನ ಸರಕಾರ ಖಾಸಗಿಯವರಿಗೆ ನೀಡಿದೆ. ಇದೀಗ ಈ ಕಾಮಗಾರಿ ಅರ್ಧಕ್ಕೆ ನಿಂತು ಕೃತಕ ಜಲಾಶಯ ಸೃಷ್ಠಿಯಾಗಿದ್ದು, ಇದರ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ನಗರಸಭೆ ಅನಮತಿ ಇಲ್ಲ

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಗರಸಭೆಯಿಂದ ಅನುಮತಿ ಪಡೆಯದೆ ಹಾಗೂ ಟೌನ್ ಪ್ಲಾನಿಂಗ್‌ಗೆ ವಿರುದ್ಧವಾಗಿ ಮೂರು ತಳ ಅಂತಸ್ತು ನಿರ್ಮಿಸಲು ಮುಂದಾಗಿದೆ. ಇದು ಕಾನೂನು ಬಾಹಿರ ಎಂಬ ಕಾರಣಕ್ಕೆ ಕಾಮ ಗಾರಿಯನ್ನು ತಡೆ ಹಿಡಿಯಲಾಗಿದೆ. ಇದೀಗ ಅದಕ್ಕಾಗಿ ತೆಗೆಯಲಾದ ಹೊಂಡ ವನ್ನು ಆ ಸಂಸ್ಥೆಯವರೇ ಮುಚ್ಚಬೇಕು. ಇಲ್ಲದಿದ್ದರೆ ಅದಕ್ಕೆ ತಗಲುವ ವೆಚ್ಚವನ್ನು ನಗರಸಭೆಗೆ ನೀಡಬೇಕು ಎಂದು ತಿಳಿಸಿದರು.

ಇದಕ್ಕೆ ಪ್ರತ್ರಿಯಿಸಿದ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್, ಈಗಾಗಲೇ ನಗರಸಭೆಯಿಂದ ಬಿ.ಆರ್.ಎಸ್. ಸಮೂಹ ಸಂಸ್ಥೆಗೆ 3 ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಈ ಅವೈಜ್ಞಾನಿಕ ಕಾಮಗಾರಿ ಯಿಂದ ಮುಂದೆ ಅನಾಹುತ ಸಂಭವಿಸಿದರೆ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ 40 ಅಡಿ ಆಳದ ಗುಂಡಿ ಮುಚ್ಚಲು 5,250 ಲೋಡ್ ಮಣ್ಣಿನ ಅಗತ್ಯವಿದ್ದು, ಇದಕ್ಕೆ ಸುಮಾರು 65 ಲಕ್ಷ ರೂ. ವೆಚ್ಚವಾಗಲಿದೆ. ಇದನ್ನು ಸಂಸ್ಥೆ ಪಾವತಿಸಬೇಕು ಅಥವಾ ಅವರೇ ಮುಚ್ಚುವಂತೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.

ವಾರದೊಳಗೆ ಗೂಡಂಗಡಿ ತೆರವು

ಬ್ರಹ್ಮಗಿರಿಯಂತೆ ನಗರದ ಬೇರೆ ಪ್ರದೇಶಗಳಲ್ಲೂ ಇರುವ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲೂ ಗೂಡಂಗಡಿ ಗಳನ್ನು ನಿರ್ಮಿಸಲಾಗಿದೆ. ಇದಕ್ಕೆಲ್ಲ ನೀವೇ ಅನುಮತಿ ಕೊಟ್ಟಿದ್ದೀರಿ ಎಂದು ಅಮೃತಾ ಕೃಷ್ಣಮೂರ್ತಿ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ರಮೇಶ್ ಕಾಂಚನ್, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಮಾಡುವುದು ಸರಿಯಲ್ಲ. ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಸದಸ್ಯರು ಸಹಕಾರ ನೀಡಿದರೆ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸುತ್ತೇವೆ. ಕಂದಾಯ ಮತ್ತು ಆರೋಗ್ಯ ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಂಡು ಪೊಲೀಸ್ ಭದ್ರತೆಯಲ್ಲಿ ವಾರದೊಳಗೆ ನಗರದ ಎಲ್ಲ ಗೂಡಂಗಡಿಗಳನ್ನು ತೆರವು ಗೊಳಿಸುವ ಕಾಯರ್ ಮಾಡಬೇಕು ಎಂದು ಸೂಚಿಸಿದರು.

ತರಕಾರಿಯಲ್ಲಿ ಕೆಮಿಕಲ್ ಮಿಶ್ರಣ

ಸದಸ್ಯ ವಿಜಯ ಕೊಡವೂರು ಮಾತನಾಡಿ, ನಗರದ ವ್ಯಾಪ್ತಿಯಲ್ಲಿ ಮಾರಾಟ ವಾಗುತ್ತಿರುವ ಹಣ್ಣು, ತರಕಾರಿ ಹಾಗೂ ಫಾಸ್ಟ್ ಫುಡ್‌ಗಳಲ್ಲಿ ಅತ್ಯಧಿಕ ಪ್ರಮಾಣ ದಲ್ಲಿ ಕೆಮಿಕಲ್ ಮಿಶ್ರಣಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ. ಇದರ ವಿರುದ್ಧ ನಗರಸಭೆ ಅಧಿಕಾರಿ ಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪರಿಸರ ಇಂಜಿನಿಯರ್, ಈ ಬಗ್ಗೆ ಆಹಾರ ಸರಬರಾಜು ಇಲಾಖೆಯವರು ತಪಾಸಣೆ ಮಾಡುತ್ತಾರೆ. ಅದೇ ರೀತಿ ನಗರಸಭೆ ಯಿಂದಲೂ ಕ್ರಮ ಜರಗಿಸಲಾಗುತ್ತದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಹಾರದಲ್ಲಿ ರಾಸಾಯನಿಕ ಮಿಶ್ರಣಕ್ಕೆ ಸಂಬಂಧಿಸಿ ಅಧಿಕೃತ ವರದಿ ಬೇಕಾಗು ತ್ತದೆ. ಈ ನಿಟ್ಟಿನಲ್ಲಿ ಕೆಲವು ಮಾದರಿಗಳನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸ ಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ.ಉದಯ ಶೆಟ್ಟಿ ಹಾರಜರಿದ್ದರು.

ತಾಯಿ ಮಕ್ಕಳ ಆಸ್ಪತ್ರೆ ಮುಚ್ಚಲು ಬಿಡಲ್ಲ

ಈ ಹಿಂದಿನ ಸರಕಾರ ಮಾಡಿರುವ ತಪ್ಪಿನಿಂದ ಇಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಈ ಆಸ್ಪತ್ರೆಯನ್ನು ಸರಕಾರ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಆಸ್ಪತ್ರೆ ಮುಚ್ಚಲು ಬಿಡುವುದಿಲ್ಲ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಪ್ರಸ್ತುತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 14 ಮಂದಿ ಸರಕಾರದಿಂದ ನಿಯೋಜಿತ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಸಿಬಂದಿಗಳಿಗೆ ಹಾಗೂ ಲಾಂಡ್ರಿ ಅವರಿಗೆ ಲಕ್ಷಾಂತರ ರೂ. ಬಾಕಿ ಇರಿಸಲಾಗಿದೆ. ಅದೇ ರೀತಿ ಬಿಆರ್‌ಎಸ್ ಸಂಸ್ಥೆಗೆ ಸರಕಾರದಿಂದ 28ಕೋಟಿ ಹಣ ಬರಬೇಕಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗೊಂದಲ ಇದೆ. ಆಸ್ಪತ್ರೆಯನ್ನು ಸರಕಾರ ನಡೆಸುವ ಬಗ್ಗೆ ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ಮುಂದೆ ಈ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News