ಕಾರ್ಯಕ್ರಮ ನಡೆಸುವವರೇ ಕೋವಿಡ್ 3ನೆ ಅಲೆ ಆಹ್ವಾನಕ್ಕೆ ಕಾರಣ: ಉಡುಪಿ ಡಿಸಿ

Update: 2021-07-31 14:07 GMT

ಉಡುಪಿ, ಜು.31: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳ ಆಗುತ್ತಿದ್ದು, ಸಕ್ರಿಯ ಪ್ರಕರಣದ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ಆದುದರಿಂದ ಜವಾಬ್ದಾರಿ ಸ್ಥಾನದಲ್ಲಿರುವವರು ಮೊದಲು ಸೂಚನೆಗಳನ್ನು ಅನುಸರಿಸಬೇಕು. ಆ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ಮಾದರಿಯಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳ ಮತ್ತು ಮಹಾರಾಷ್ಟ್ರದ ಜೊತೆ ಉಡುಪಿ ಜಿಲ್ಲೆ ಸಂಪರ್ಕದಲ್ಲಿದೆ. ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದರೂ ಕಾರ್ಯಕ್ರಮಗಳು ನಡೆಯುತ್ತಿದೆ. ಬೇರೆಬೇರೆ ಕಾರ್ಯಕ್ರಮ ಮಾಡುವವರೇ ಮೂರನೇ ಅಲೆಯ ಆಹ್ವಾನಕ್ಕೆ ಕಾರಣ ಆಗು ತ್ತಿದ್ದಾರೆ. ಕಾರ್ಯಕ್ರಮ ಮಾಡುವವರಿಂದ ಸಾಮಾನ್ಯ ಜನರ ಜೀವನಕ್ಕೆ ಕಷ್ಟವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಸಿಟಿವಿಟಿ ರೇಟ್ ಹೆಚ್ಚಳ: ಜಿಲ್ಲೆಯಲ್ಲಿ ಪ್ರತಿದಿನ 3500 ಕೊರೋನಾ ಪರೀಕ್ಷೆ ಮಾಡಲಾಗುತ್ತಿದ್ದು, ಪ್ರಾಥಮಿಕ ಸಂಪರ್ಕದಿಂದ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಾದ್ಯಂತ 1 ತಿಂಗಳಿನಿಂದ ಪ್ರತಿದಿನ 100 ಪಾಸಿಟಿವ್ ಕೇಸ್ ಬರುತ್ತಿದೆ. ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ.3 ಆಸುಪಾಸಿನಲ್ಲಿದೆ. ಕಳೆದ 2-3ದಿನಗಳಿಂದ ಶೇ.5 ಪಾಸಿಟಿವಿಟಿ ರೇಟ್ ಬುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೋಮ್ ಐಸೋಲೇಶನ್‌ಗೆ ಅವಕಾಶ ಕೊಡಬಾರದೆಂದು ಅಧಿಕಾರಿಗಳು- ತಜ್ಞರು, ವೈದ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಪಾಸಿಟಿವ್ ಕೇಸ್ಗಳಿಗೆ ಚಿಕಿತ್ಸೆ ಸಿಗಬೇಕು. ಜಿಲ್ಲಾ ಗಡಿಯಲ್ಲೂ ಚೆಕ್ ಪೋಸ್ಟ್ ರಚನೆ ಮಾಡಲಾಗಿದೆ. ಟೆಸ್ಟ್ ರಿಪೋರ್ಟ್ ಇಲ್ಲದೆ ಬರುವವರನ್ನು ತಡೆಯಲಾಗುವುದು ಎಂದರು.

ಪ್ರಸ್ತುತ ಎರಡನೇ ಅಲೆಯೋ ಅಥವಾ ಮೂರನೇ ಅಲೆಯೋ ಎಂಬುದನ್ನು ತಜ್ಞರು ನಿರ್ಧಾರ ಮಾಡಬೇಕು. ನನ್ನ ಪ್ರಕಾರ ಎರಡನೇ ಅಲೆ ಇನ್ನು ಕೂಡ ಮುಂದುವರೆದಿದೆ. ಜಿಲ್ಲೆಯಲ್ಲಿ ಪಾಸಿಟಿವ್‌ಗಳ ಸಂಖ್ಯೆ ಒಂದಂಕಿಗೆ ಇನ್ನೂ ಇಳಿದಿಲ್ಲ. ಎರಡನೇ ಅಲೆ ಇನ್ನೂ ಮುಕ್ತಾಯವಾದಂತೆ ಕಾಣಿಸುತ್ತಿಲ್ಲ ಎಂದು ಅವರು ತಿಳಿಸಿದರು.

‘ದೇವಳಗಳಲ್ಲಿ ಸಾಮಾಜಿಕ ಅಂತರ ಮಾಯ’

ಜಿಲ್ಲೆಯಲ್ಲಿ ಎರಡನೆಯ ಅಲೆ ಇನ್ನೂ ಮುಕ್ತಾಯ ಆಗಿಲ್ಲ. ಜನರಲ್ಲಿ ಕೊರೋನ ಹೋಗಿದೆ ಎಂಬ ಭಾವನೆ ಬರುವುದು ಬೇಡ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾಸ್ಕ್‌ಗಳು ಮಾಯವಾಗಿವೆ. ದೇವಸ್ಥಾನಗಳಲ್ಲಿ ಜನ ಸಾಮಾಜಿಕ ಅಂತರವನ್ನು ಮರೆತಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸು ವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಚಿಸ ಲಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಕೊರೋನ ಮಾರ್ಗಸೂಚಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News