ಕೋಟೇಶ್ವರದಲ್ಲಿ ಫೈನಾನ್ಸಿಯರ್‌ನ ಹತ್ಯೆ ಪ್ರಕರಣ; ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ: ಆರೋಪಿ ಸೆರೆ

Update: 2021-07-31 15:34 GMT
ಅಜೇಂದ್ರ ಶೆಟ್ಟಿ - ಅನೂಪ್ ಶೆಟ್ಟಿ

ಕುಂದಾಪುರ, ಜು.31: ವ್ಯವಹಾರಕ್ಕೆ ಸಂಬಂಧಿಸಿದ ದ್ವೇಷದಲ್ಲಿ ಫೈನಾನ್ಸಿಯರೊಬ್ಬರು ತನ್ನ ಪಾಲುದಾರನಿಂದಲೇ ಭೀಕರವಾಗಿ ಹತ್ಯೆಗೀಡಾ ಗಿರುವ ಘಟನೆ ಜು.30ರಂದು ರಾತ್ರಿ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ನಡೆದಿದ್ದು, ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಡಾಡಿ ಮತ್ಯಾಡಿ ಗ್ರಾಮದ ಕೂಡಾಲು ನಿವಾಸಿ ಜಗನ್ನಾಥ ಶೆಟ್ಟಿ ಎಂಬವರ ಮಗ ಅಜೇಂದ್ರ ಶೆಟ್ಟಿ (33) ಕೊಲೆಗೀಡಾಗಿದ್ದು, ಬಂಧಿತನನ್ನು ಪಾಲುದಾರ ಮೊಳಹಳ್ಳಿ ನಿವಾಸಿ ಅನೂಪ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಇವರಿಬ್ಬರು ಪಾಲುದಾರಿಕೆಯಲ್ಲಿ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್‌ನಲ್ಲಿ 2017ರಿಂದ ಫೈನಾನ್ಸ್ ವ್ಯವಹಾರ ನಡೆಸಿಕೊಂಡಿದ್ದರು. ಅಂಜೇಂದ್ರ ಶೆಟ್ಟಿ ಜು.30ರಂದು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹಾಗೂ ಆತನ ಸ್ನೇಹಿತರು ಹುಡುಕಾಟ ನಡೆಸಿದರು. ರಾತ್ರಿ 11:15ರ ಸುಮಾರಿಗೆ ಫೈನಾನ್ಸ್‌ನಲ್ಲಿ ಬಂದು ನೋಡುವಾಗ ಅಜೇಂದ್ರ ಶೆಟ್ಟಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂತೆನ್ನಲಾಗಿದೆ.

ಆರೋಪಿ ಕಾರಿನೊಂದಿಗೆ ಪರಾರಿ: ಇದೇ ವೇಳೆ ಅನೂಪ್‌ಗೆ ಫೋನ್ ಮಾಡಿದಾಗ ಆತನ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು. ಬಳಿಕ ಸಮೀಪದ ಅಂಗಡಿ ಅವರನ್ನು ವಿಚಾರಿಸಿದಾಗ ಇವರಿಬ್ಬರು ರಾತ್ರಿ 8:30ರವರೆಗೆ ಫೈನಾನ್ಸ್‌ನಲ್ಲಿ ಒಟ್ಟಿಗೆ ಇದ್ದರು ಎಂದು ತಿಳಿಸಿದ್ದಾರೆ.

ಪೈನಾನ್ಸ್ ವ್ಯವಹಾರ ಹಾಗೂ ಹಣಕಾಸಿಗೆ ಸಂಬಂಧಿಸಿ ಅಜೇಂದ್ರನೊಂದಿಗೆ ಅನೂಪ್ ತಕರಾರು ಮಾಡಿರುವ ವಿಚಾರವನ್ನು ಅಜೇಂದ್ರ ತನ್ನ ಅಣ್ಣನಲ್ಲಿ ಹೇಳಿ ಕೊಂಡಿದ್ದನು. ಅಲ್ಲದೇ ಅಜೇಂದ್ರ ಇತ್ತೀಚೆಗೆ ಹೊಸದಾಗಿ ಖರೀದಿಸಿದ ಕಾರಿನ ಬಗ್ಗೆ ಕೂಡ ಅನೂಪ್‌ಗೆ ಅಸಮಾಧಾನ ಇತ್ತೆನ್ನಲಾಗಿದೆ. ಇದೇ ವೈಮನಸ್ಸಿನಿಂದ ಅನೂಪ್, ಅಜೇಂದ್ರನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ದೂರ ಲಾಗಿದೆ.

ಕೊಲೆ ಮಾಡಿದ ಬಳಿಕ ಅನೂಪ್, ಅಜೇಂದ್ರನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಅಜೇಂದ್ರ ಖರೀದಿಸಿರುವ ಹೊಸ ಹೊಂಡಾ ಸಿಟಿ ಬಿಳಿ ಕಾರನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮೃತರ ಸಹೋದರ ಮಹೇಂದ್ರ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವಾದಲ್ಲಿ ಬಂಧನ: ರಾತ್ರಿ ವೇಳೆ ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಡಿವೈಎಸ್ಪಿ ಶ್ರೀಕಾಂತ್, ಪ್ರಕರಣದ ತನಿಖಾಧಿಕಾರಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಿರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಅದೇ ರೀತಿ ಬೆರಳಚ್ಚು ತಜ್ಞರು, ಶ್ವಾನ ದಳ, ವಿಧಿ ವಿಜ್ಞಾನ ಪ್ರಯೋಗಾ ಲಯದ ತಂಡ ಆಗಮಿಸಿ ಪರಿಶೀಲನೆ ನಡೆಸಿತ್ತು. ಮೃತರ ಮರಣೋತ್ತರ ಪರೀಕ್ಷೆ ಯನ್ನು ಮಣಿಪಾಲದಲ್ಲಿ ನಡೆಸಲಾಗಿದೆ. ಅಜೇಂದ್ರ ಶೆಟ್ಟಿ ಮೊದಲು ಹೈದರಬಾದ್‌ನಲ್ಲಿ ನಂತರ ಕೋಟೇಶ್ವರ ಹೊಟೇಲ್ ಉದ್ಯಮ ನಡೆಸಿದ್ದನು. ಮೃತರು ತಂದೆ ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದ ತಂಡ ಜು.31ರಂದು ಆರೋಪಿ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಬಂಧಿಸಿದೆ. ಆತನಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಕುಂದಾಪುರಕ್ಕೆ ಕರೆ ತರಲಾಗುತ್ತಿದ್ದು, ಹತ್ಯೆಗೆ ಕಾರಣ ಏನು ಎಂಬುದು ವಿಚಾರಣೆಯಿಂದ ತಿಳಿದುಬರಬೇಕಾಗಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News