ದ.ಕ. ಜಿಲ್ಲೆ : ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಎನ್‌ಎಬಿಎಲ್ ಮಾನ್ಯತೆ

Update: 2021-07-31 16:47 GMT

ಮಂಗಳೂರು, ಜು.31: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಸ್ಥಾಪನೆಯಾದ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಜಿಲ್ಲಾ ಪ್ರಯೋಗಾಲಯವು ಎನ್‌ಎಬಿಎಲ್ (ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್) ಮಾನ್ಯತೆ ಪಡೆದಿರುವ ರಾಜ್ಯದ ಮೊದಲ ಪ್ರಯೋಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಿಲ್ಲಾ ಪ್ರಯೋಗಾಲಯಕ್ಕೆ ಎನ್‌ಎಬಿಎಲ್‌ನಿಂದ ಅಂತಿಮ ಆಡಿಟ್‌ನ್ನು ಆರ್.ಕೆ. ಸೋಲಂಕಿ ನೇತೃತ್ವದಲ್ಲಿ ತಾಂತ್ರಿಕ ಮೌಲ್ಯಮಾಪಕ ಸ್ಯಾಮ್ಯುಯಲ್ ಪ್ರಸನ್ನ ಜೂ.2ರಂದು ಕೈಗೊಂಡಿದ್ದರು. ಅಂತಿಮ ಪರಿಶೋಧನೆಯಲ್ಲಿ ಸೂಚಿಸಲಾದ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡು ಈ ಪರೀಕ್ಷಾ ವರದಿಗಳು ಮತ್ತಿತರ ದಾಖಲಾತಿಗಳನ್ನು ಆಡಿಟರ್‌ಗಳಿಗೆ ಸಲ್ಲಿಸಲಾಗಿತ್ತು.

ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡಿರುವ ಕಾರ್ಯವಿಧಾನಗಳ ದಾಖಲಾತಿಗಳು, ನೀರಿನ ಗುಣಮಟ್ಟದ ಪರೀಕ್ಷಾ ವರದಿಗಳ ಪರಿಶೀಲನೆ, ಪ್ರಯೋಗಾಲಯದಲ್ಲಿ ನಿರ್ವಹಿಸಿರುವ ದಾಖಲಾತಿಗಳ ಆಧಾರದ ಮೇಲೆ ಇದೀಗ ದ.ಕ. ಜಿಲ್ಲಾ ಪ್ರಯೋಗಾಲಯಕ್ಕೆ ಎನ್‌ಎಬಿಎಲ್ ಮಾನ್ಯತೆ ನೀಡಿದೆ.

ಎನ್‌ಎಬಿಎಲ್ ಮಾನ್ಯತೆಯಂತೆ ಇದೀಗ ದ.ಕ. ಜಿಲ್ಲಾ ಪ್ರಯೋಗಾಲಯವು 16 ನಿಯತಾಂಕಗಳ ಪರೀಕ್ಷೆ ಕೈಗೊಳ್ಳಲು ಅರ್ಹತೆ ಹೊಂದಿದಂತಾಗಿದೆ. ಅಂದರೆ ನೀರಿನ ಬಣ್ಣ, ವಾಸನೆ, ರುಚಿ, ಪಿಎಚ್ ಮಟ್ಟ, ಟರ್ಬಿಡಿಟಿ, ವಿದ್ಯುತ್ ವಾಹಕತೆ, ಟಿಡಿಎಸ್, ಕ್ಲೋರೈಡ್, ಒಟ್ಟು ಗಡಸುತನ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕ್ಷಾರತೆ, ನೈಟ್ರೇಟ್, ಫ್ಲೋರೈಡ್, ಕಬ್ಬಿಣ ಮತ್ತು ಸಲ್ಫೇಟ್ ಪರೀಕ್ಷೆಗಳನ್ನು ನಡೆಸಲು ಅಧಿಕೃತ ಮಾನ್ಯತೆ ಪಡೆದಂತಾಗಿದೆ.

ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯಗಳಿಗೆ ಭಾರತ ಸರಕಾರದ ಜಲಜೀವನ್ ಮಿಷನ್ ಮಾರ್ಗಸೂಚಿ ಪ್ರಕಾರ ಎನ್‌ಎಬಿಎಲ್ ಮಾನ್ಯತೆ ಪಡೆಯುವುದು ಕಡ್ಡಾಯ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಸ್ಥಾಪಿಸಿರುವ ಪ್ರಯೋಗಾಲಯಗಳಲ್ಲಿ ಕೈಗೊಳ್ಳುವ ನೀರಿನ ಗುಣಮಟ್ಟದ ಪರೀಕ್ಷಾ ವರದಿಗಳ ನಿಖರತೆಗೆ ಸಂಬಂಧಿಸಿದಂತೆ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಪರೀಕ್ಷಾ ಸಂಸ್ಥೆಗೆ ಭಾರತದಲ್ಲಿ ಮಾನ್ಯತೆ ಪಡೆದ ಪ್ರಾಧಿಕಾರದಿಂದ ಪ್ರಮಾಣೀಕರಣ ಮಾಡಬೇಕಾದ ಅಗತ್ಯವಿದೆ.

ಆದರೆ ಈ ಮಾನ್ಯತೆ ಪಡೆಯುವುದು ಕ್ಲಿಷ್ಟಕರ ಪ್ರಕ್ರಿಯೆ. ಎನ್‌ಎಬಿಎಲ್ ಮಾರ್ಗಸೂಚಿ ಅನ್ವಯ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು ಸೂಕ್ತ ಅರ್ಹತೆ ಹೊಂದಿರುವ, ನುರಿತ ಮತ್ತು ಅನುಭವವಿರುವ ಸಿಬ್ಬಂದಿ ಇರಬೇಕಾಗುತ್ತದೆ. ಅಲ್ಲದೆ, ನಿರ್ದಿಷ್ಟ ಉಪಕರಣಗಳು ಮತ್ತು ಇತರ ಮೂಲಭೂತ ಸೌಕರ್ಯಗಳು ಮತ್ತು ಪ್ರಯೋಗಾಲಯ ನಿರ್ವಹಣೆಗೆ ತಕ್ಕಂತೆ ಕಟ್ಟಡದ ರಚನೆಯೂ ಇರಬೇಕು. ಪ್ರಯೋಗಾಲಯದ ಗುಣಮಟ್ಟದ ಕೈಪಿಡಿ, ನಿರ್ವಹಣಾ ವ್ಯವಸ್ಥೆಯ ಕಾರ್ಯ ವಿಧಾನಗಳು, ಐಎಸ್ ಭಾರತೀಯ ಮಾನದಂಡಗಳ ಪ್ರಕಾರ ಪ್ರಮಾಣಿತ ಕಾರ್ಯಾಚರಣೆ ಕಾರ್ಯ ವಿಧಾನದ ಕೈಪಿಡಿ ಮತ್ತು ದಾಖಲಾತಿಗಳ ನಮೂನೆಗಳನ್ನು ಸಿದ್ಧಪಡಿಸಿಕೊಳ್ಳಬೇಕಿರುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಹಾಗೂ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ದ.ಕ. ಜಿಲ್ಲಾ ಪ್ರಯೋಗಾಲಯವು ಇದೀಗ ಮಾನ್ಯತೆ ಪಡೆಯುವ ಮೂಲಕ ಸಾಧನೆ ಮಾಡಿದೆ.

1998ರಲ್ಲಿ ಜಿಲ್ಲಾ ಕುಡಿಯುವ ನೀರಿನ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿತ್ತು. ಎನ್‌ಎಬಿಎಲ್ ಮಾರ್ಗಸೂಚಿಯಂತೆ ಜಿಲ್ಲೆಯ ಪ್ರಯೋಗಾಲಯದಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಲು ಜಿಪಂ ಸಿಇಒ ನೇತೃತ್ವದಲ್ಲಿ ಪ್ರಯೋಗಾಲಯ ನಿರ್ವಹಣಾ ಸಮಿತಿಯಿಂದ ವಿಮರ್ಶೆ ಸಭೆ ನಡೆಸಿ, ಎಲ್ಲ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಂಡ ಬಳಿಕ ಎ.28ರಂದು ಎನ್‌ಎಬಿಎಲ್‌ಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News