ಉ.ಪ್ರ. ಚುನಾವಣೆಯಲ್ಲಿ ಎಲ್ಲಾ ಸಣ್ಣ ಪಕ್ಷಗಳೊಂದಿಗೆ ಮೈತ್ರಿಗೆ ಎಸ್ಪಿ ಸಿದ್ಧ: ಅಖಿಲೇಶ್ ಯಾದವ್

Update: 2021-08-01 17:42 GMT

ಲಕ್ನೋ, ಆ.1: ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ತನ್ನ ಪಕ್ಷ ಎಲ್ಲ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ರವಿವಾರ ಹೇಳಿದ್ದಾರೆ.

   ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಇಂತಹ ಎಲ್ಲ ಪಕ್ಷಗಳನ್ನು ಸಂಘಟಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನೀವು ಯಾವ ಪಕ್ಷದ ಪರವಾಗಿದ್ದೀರಿ ಎಂದು ಅವರು ಕಾಂಗ್ರೆಸ್ ಹಾಗೂ ಬಿಎಸ್ಪಿಯನ್ನು ಪ್ರಶ್ನಿಸಿದ್ದಾರೆ. ತಮ್ಮ ಹೋರಾಟ ಬಿಜೆಪಿ ವಿರುದ್ಧವೋ ಅಥವಾ ಸಮಾಜವಾದಿ ಪಕ್ಷದ ವಿರುದ್ಧವೋ ಎಂಬುದನ್ನು ಈ ಪಕ್ಷಗಳು ನಿರ್ಧರಿಸಬೇಕು ಎಂದು ಅವರು ಹೇಳಿದ್ದಾರೆ.

 ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಸಾಧ್ಯತೆ ಕುರಿತು ಮಾತನಾಡಿದ ಅವರು, ಎಲ್ಲಾ ಸಣ್ಣ ಪಕ್ಷಗಳಿಗೆ ನಮ್ಮ ಪಕ್ಷದ ಬಾಗಿಲು ತೆರೆದಿದೆ. ಹಲವು ಸಣ್ಣ ಪಕ್ಷಗಳು ಈಗಾಗಲೇ ನಮ್ಮಿಂದಿಗೆ ಸೇರಿವೆ. ಇನ್ನಷ್ಟು ಸಣ್ಣ ಪಕ್ಷಗಳು ನಮ್ಮಿಂದಿಗೆ ಸೇರಲಿವೆ ಎಂದು ಅವರು ಹೇಳಿದರು.

 ಪೆಗಾಸಸ್ ಬೇಹುಗಾರಿಕೆ ವಿವಾದ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಅವರು, ‘‘ಎನ್ಡಿಎಗೆ ಲೋಕಸಭೆಯಲ್ಲಿ 350 ಸ್ಥಾನಗಳಿವೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. ಬೇಹುಗಾರಿಕೆ ಮೂಲಕ ಸರಾಕಾರ ಏನನ್ನು ಯಾಕಾಗಿ ತಿಳಿದು ಕೊಳ್ಳಲು ಬಯಸುತ್ತಿದೆ ? ಈ ಕ್ರಮದ ಮೂಲಕ ಅವರು ವಿದೇಶಿ ಶಕ್ತಿಗೆ ನೆರವು ನೀಡುತ್ತಿದ್ದಾರೆ’’ ಎಂದು ಯಾದವ್ ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷದ ಬಗ್ಗೆ ಪ್ರಶ್ನಿಸಿದಾಗ ಅವರು, ಬಿಜೆಪಿಯನ್ನು ಸೋಲಿಸಲು ಎಲ್ಲ ಪಕ್ಷಗಳನ್ನು ಸಂಘಟಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News