ಅಪ್ನಿ ಪಾರ್ಟಿ ಬಿಜೆಪಿಯ ʼಬಿʼ ತಂಡವಲ್ಲ, ಎನ್ಸಿ ಮತ್ತು ಪಿಡಿಪಿ ಅದರಿಂದ ಲಾಭ ಪಡೆದಿವೆ: ಅಲ್ತಾಫ್ ಬುಖಾರಿ

Update: 2021-08-01 17:52 GMT

ಶ್ರೀನಗರ,ಆ.1: ರಾಜಕೀಯವನ್ನು ಹೊಸದಾಗಿ ಪ್ರವೇಶಿಸಿರುವ ಜಮ್ಮು-ಕಾಶ್ಮೀರ ಅಪ್ನಿ ಪಾರ್ಟಿಯು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮತ್ತು ಪಿಡಿಪಿಯಂತಹ ರಾಜಕೀಯ ಎದುರಾಳಿಗಳು ಬಣ್ಣಿಸಿರುವಂತೆ ಬಿಜೆಪಿಯ ಬಿ-ತಂಡ ಅಥವಾ ‘ಕಿಂಗ್ಸ್ ಪಾರ್ಟಿ ’ಅಲ್ಲ,ಆದರೆ ವಂಶ ಪರಂಪರೆಯ ಇತಿಹಾಸವಿಲ್ಲದ ಸಂಘಟನೆಯಾಗಿದೆ ಎಂದು ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಖಾರಿ ಅವರು ರವಿವಾರ ಇಲ್ಲಿ ಹೇಳಿದರು. ‌

ಎನ್ಸಿ ಮತ್ತು ಪಿಡಿಪಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜಮ್ಮು-ಕಾಶ್ಮೀರದಲ್ಲಿ ಅಧಿಕಾರವನ್ನು ಅನುಭವಿಸಿವೆ ಮತ್ತು ನಮ್ಮ ಪಕ್ಷವನ್ನು ಇಂತಹ ಹೆಸರುಗಳಿಂದ ಕರೆಯುತ್ತಿದ್ದಾರೆ, ವಾಸ್ತವದಲ್ಲಿ ಈ ಪಕ್ಷಗಳೇ ಬಿಜೆಪಿಯ ಬಿ-ತಂಡಗಳಾಗಿವೆ ಎಂದು ಸುದ್ದಿಗಾರರಿಗೆ ತಿಳಿಸಿದ ಬುಖಾರಿ,ತಮ್ಮ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರೂ ದಿಲ್ಲಿಯಲ್ಲಿ ಆಳುವವರನ್ನು ಭೇಟಿಯಾಗುವುದನ್ನು ಈ ಪಕ್ಷಗಳು ಇಷ್ಟ ಪಡುತ್ತಿಲ್ಲವೆಂಬಂತೆ ಕಂಡು ಬರುತ್ತಿದೆ ಎಂದರು. 

ದಿಲ್ಲಿಯಿಂದ ಯಾವುದೇ ಲಾಭ ಪಡೆದಿರದ ಪಕ್ಷವನ್ನು ಬಿ-ತಂಡ ಎಂದು ಬಣ್ಣಿಸಿರುವುದು ವ್ಯಂಗ್ಯವಾಗಿದೆ. ಬಿಜೆಪಿಯ ಕೃಪೆಯಿಂದ ಅಧಿಕಾರವನ್ನು ಅನುಭವಿಸಿದವರು ನಮ್ಮನ್ನು ಬಿ-ತಂಡ ಎಂದು ಕರೆಯುತ್ತಿದ್ದಾರೆ. ಅಧಿಕಾರದ ಮೇಲಿನ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು ಮತ್ತು ರಾಜಕೀಯವನ್ನು ಪ್ರವೇಶಿಸುವ ಹೊಸಬರ ಬಗ್ಗೆ ಶಂಕೆ ಮೂಡಿಸಲು ಬಯಸಿರುವ ಈ ಪಕ್ಷಗಳನ್ನು ಜನರು ನಿಜಕ್ಕೂ ಬಯಲಿಗೆಳೆಯಬೇಕು ಎಂದು ಮುಫ್ತಿ ಮುಹಮ್ಮದ್ ಸಯೀದ್ ಮತ್ತು ಮೆಹಬೂಬ ಮುಫ್ತಿ ನೇತೃತ್ವದ ಸರಕಾರಗಳಲ್ಲಿ ಸಚಿವರಾಗಿದ್ದ ಬುಖಾರಿ ಕಿಡಿಕಾರಿದರು.
  
ಇತರ ಕೆಲವು ನಾಯಕರೊಂದಿಗೆ ಸೇರಿಕೊಂಡು 2020 ಮಾರ್ಚ್ನಲ್ಲಿ ಅಪ್ನಿ ಪಾರ್ಟಿಯನ್ನು ಸ್ಥಾಪಿಸಿದ ಬುಖಾರಿ,ಬದಲಾಗಿರುವ ವಾಸ್ತವಗಳೊಂದಿಗೆ ಜಮ್ಮು-ಕಾಶ್ಮೀರದ ರಾಜಕೀಯ ರಂಗದಲ್ಲಿ ಹೊರಹೊಮ್ಮಲು ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ಜೈಲಿನಿಂದ ಜನರ ಬಿಡುಗಡೆಯ ಬಗ್ಗೆ ಚರ್ಚಿಸಲು, ಜನಸಂಖ್ಯಾ ಸ್ವರೂಪದಲ್ಲಿ ಬದಲಾವಣೆಯ ಯಾವುದೇ ಬದಲಾವಣೆಯ ಭೀತಿಯನ್ನು ನಿವಾರಿಸಲು ಮತ್ತು ಉದ್ಯೋಗ ಮತ್ತು ಭೂಮಿ ನಷ್ಟವಿರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ತಾನು ದಿಲ್ಲಿಗೆ ತೆರಳಿದ್ದೆ. ಅಷ್ಟಕ್ಕೇ ಎನ್ಸಿ ಮತ್ತು ಪಿಡಿಪಿ ಏಕೆ ಬೊಬ್ಬಿರಿಯುತ್ತಿವೆ ಎಂದು ಪ್ರಶ್ನಿಸಿದರು. 

ಏಕೆಂದರೆ ದಿಲ್ಲಿಗೆ ಹೋಗುವುದು ತಮ್ಮ ಹಕ್ಕು,ದಿಲ್ಲಿಯಲ್ಲಿ ಆಡಳಿತದಲ್ಲಿರುವವರನ್ನು ಭೇಟಿಯಾಗುವುದು ತಮ್ಮ ವಂಶ ಪಾರಂಪರಿಕ ಹಕ್ಕು ಎಂದು ಈ ಪಕ್ಷಗಳು ಭಾವಿಸಿರುವುದರಿಂದ ನನ್ನಂತಹ ವ್ಯಕ್ತಿಗಳು ಪ್ರಧಾನಿಯನ್ನು ಭೇಟಿಯಾದರೆ ಅವರು ದಿಲ್ಲಿಯ ಏಜೆಂಟರಾಗಿಬಿಡುತ್ತಾರೆ ಎಂದರು. ಜಮ್ಮು-ಕಾಶ್ಮೀರದಲ್ಲಿ ಅಧಿಕಾರದ ಮೇಲಿನ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲು ಈ ಪಕ್ಷಗಳು 1947ರಿಂದಲೂ ಈ ನಡೆಯನ್ನು ಅನುಸರಿಕೊಂಡು ಬಂದಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News