ಆಮಗಢ ಕೋಟೆಯಲ್ಲಿ ಧ್ವಜಾರೋಹಣ: ರಾಜಸ್ಥಾನದ ಬಿಜೆಪಿ ಸಂಸದನ ಬಂಧನ

Update: 2021-08-01 17:56 GMT

 ಜೈಪುರ, ಆ.1: ಜೈಪುರದ ಆಮಗಢ ಕೋಟೆಯಲ್ಲಿ ರವಿವಾರ ನಿಷೇಧಾಜ್ಞೆ ಉಲ್ಲಂಘಿಸಿ ಮೀನಾ ಸಮುದಾಯದ ಧ್ವಜಾರೋಹಣ ಮಾಡಿದ ಬಳಿಕ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೋಟೆಯ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದ ಹೊರತಾಗಿಯೂ ಕಿರೋಡಿ ಲಾಲ್ ಮೀನಾ ಹಾಗೂ ಅವರ ಬೆಂಬಲಿಗರು ಕೋಟೆಯ ಆವರಣಕ್ಕೆ ಪ್ರವೇಶಿಸಿ ಧ್ವಜಾರೋಹಣಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು.

‘‘12ಕ್ಕೂ ಅಧಿಕ ಧೀರ ಮೀನಾ ಯುವಕರೊಂದಿಗೆ ನಾವು ಆಮಗಢ ಕೋಟೆಯನ್ನು ಪ್ರವೇಶಿಸಲು ಇದ್ದ ಹಲವು ಸವಾಲಗಳನ್ನು ಎದುರಿಸಿದೆವು ಹಾಗೂ ಮೀನಾ ಸಮುದಾಯದ ಧ್ವಜವನ್ನು ಹಾರಿಸಿದೆವು’’ ಎಂದು ಕಿರೋಡಿ ಲಾಲ್ ಮೀನಾ ಅವರು ಪೊಲೀಸರು ಸ್ಥಳಕ್ಕೆ ಧಾವಿಸುವ ಮುನ್ನ ಬೆಂಬಲಿಗರು ದಾಖಲಿಸಿದ ವೀಡಿಯೊದಲ್ಲಿ ಹೇಳಿದ್ದಾರೆ.

ತಮ್ಮ ಸಂಸ್ಕೃತಿಯನ್ನು ಸಂಘಪರಿವಾರ ತಿರುಚುತ್ತಿದೆ ಎಂದು ಆರೋಪಿಸಿ ಮೀನ ಸಮುದಾಯದ ಸದಸ್ಯರು ಆಮಗಢ ಕೋಟೆಯ ಮೇಲೆ ಹಾರಿಸಿದ್ದ ಕೇಸರಿ ಧ್ವಜವನ್ನು ತೆಗೆದ ಬಳಿಕೆ ಜೈಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಕೋಟೆಯಿಂದ ಕೇಸರಿ ಧ್ವಜವನ್ನು ತೆಗೆದ ಬಳಿಕ ಶನಿವಾರ ನಗರದಲ್ಲಿ ಪೊಲೀಸರು ಧ್ವಜ ಮೆರವಣಿಗೆ ನಡೆಸಿದ್ದರು. ಅಲ್ಲದೆ, ಹಿಂಸಾಚಾರ ಸಂಭವಿಸಿದಿರಲು ಅಮಗಢ ಕೋಟೆಗೆ ಭೇಟಿ ನೀಡದಂತೆ ಜನರಲ್ಲಿ ವಿನಂತಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News