ಉತ್ತರಾಖಂಡ:ಅರ್ಚಕರು, ಇತರ ಸದಸ್ಯರೊಂದಿಗೆ ಅನುಚಿತ ವರ್ತನೆ ಆರೋಪ, ಬಿಜೆಪಿ ಸಂಸದನ ವಿರುದ್ಧ ಪ್ರಕರಣ
ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರೆವೆನ್ಯೂ ಪೊಲೀಸರು ಉತ್ತರಪ್ರದೇಶದ ಅಒನ್ಲಾದ ಬಿಜೆಪಿ ಸಂಸದ ಧರ್ಮೇಂದ್ರ ಕಶ್ಯಪ್ ಹಾಗೂ ಇತರ ಮೂವರ ವಿರುದ್ಧ ಜಗೇಶ್ವರ ಧಾಮದ ಅರ್ಚಕರು ಹಾಗೂ ದೇವಾಲಯದ ನಿರ್ವಹಣಾ ಸಮಿತಿಯ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಲೈ 31 ರಂದು ಈ ಘಟನೆ ನಡೆದಿದೆ. ದೇವಾಲಯ ಸಮಿತಿಯ ದೂರಿನ ಮೇರೆಗೆ ಸಂಸದ, ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಂದಾಯ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಸಿಂಗ್ ಬಿಶ್ತ್ ಹೇಳಿದ್ದಾರೆ.
ಕಶ್ಯಪ್ ಹಾಗೂ ಇತರ ಮೂವರು ಮಧ್ಯಾಹ್ನ 3.30 ರ ಸುಮಾರಿಗೆ ದೇವಸ್ಥಾನಕ್ಕೆ ಹೋಗಿದ್ದರು ಹಾಗೂ ಸಂಜೆ 6 ಗಂಟೆಗೆ ಭಕ್ತರಿಗಾಗಿ ಗೇಟ್‌ಗಳನ್ನು ಮುಚ್ಚಿದರೂ ಸುಮಾರು 6.30 ರವರೆಗೆ ದೇವಾಲಯದ ಒಳಗೆ ಉಳಿದಿದ್ದರು.
"ದೂರಿನ ಪ್ರಕಾರ, ಸಿಬ್ಬಂದಿಯು ದೇವಸ್ಥಾನದಿಂದ ಹೊರಹೋಗುವಂತೆ ಸಂಸದರಿಗೆ ಪದೇ ಪದೇ ವಿನಂತಿಸಿಕೊಂಡರು. ನಾವು ಸಂಸದರನ್ನು ದೇವಸ್ಥಾನದಿಂದ ಹೊರ ಹೋಗುವಂತೆ ಕೇಳಿದಾಗ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ನಿಂದಿಸಿದರು ಎಂದು ಅರ್ಚಕರು ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.
ಕಶ್ಯಪ್ ಹಾಗೂ ಇತರ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಹಾಗೂ 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಿಶ್ತ್ ಹೇಳಿದರು.
ಈ ಘಟನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಗಣೇಶ್ ಗೋಡಿಯಾಲ್ ಅವರು ಕಶ್ಯಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಕೇಳಿಕೊಂಡರು.