ಗೃಹ ಸಚಿವಾಲಯದ ವೆಬ್‍ಸೈಟ್‍ನಿಂದ ನಾಪತ್ತೆಯಾದ ಸಚಿವ ನಿಶಿತ್ ಪ್ರಾಮಾಣಿಕ್ ವಿದ್ಯಾರ್ಹತೆ!

Update: 2021-08-02 09:51 GMT

ಕೊಲ್ಕತ್ತಾ : ಕೇಂದ್ರ ಗೃಹ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್ ಆವರ ಶೈಕ್ಷಣಿಕ ವಿದ್ಯಾರ್ಹತೆಯ ವಿವರ  ಸಚಿವಾಲಯದ ವೆಬ್‍ಸೈಟ್‍ನಿಂದ ನಾಪತ್ತೆಯಾಗಿದೆ. ಅದೇ ಸಮಯ ಸಚಿವಾಲಯದ ಇತರ ಇಬ್ಬರು ಕಿರಿಯ ಸಚಿವರುಗಳಾದ ನಿತ್ಯಾನಂದ್ ರಾಯ್ ಮತ್ತು ಅಜಯ್ ಕುಮಾರ್ ಮಿಶ್ರಾ ಅವರ ವಿದ್ಯಾರ್ಹತೆಯ ಮಾಹಿತಿ ವೆಬ್ ತಾಣದಲ್ಲಿದೆ.

ಲೋಕಸಭಾ ವೆಬ್‍ಸೈಟ್‍ನಲ್ಲಿ ಹಾಗೂ 2019 ಹಾಗೂ 2021ರಲ್ಲಿ ಸಲ್ಲಿಸಿದ್ದ ಚುನಾವಣಾ ಅಫಿಡವಿಟ್‍ನಲ್ಲಿ ಪ್ರಾಮಾಣಿಕ್ ಅವರ ವಿದ್ಯಾರ್ಹತೆ ಕುರಿತಾದ ಮಾಹಿತಿಯಲ್ಲಿರುವ ವ್ಯತ್ಯಯವೇ ಇದಕ್ಕೆ ಕಾರಣ.

ಕೇಂದ್ರ ಸರಕಾರದ ಅತ್ಯಂತ ಕಿರಿಯ ಸಚಿವರಾಗಿರುವ ಪ್ರಾಮಾಣಿಕ್, ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಕ್ಷೇತ್ರದ ಸಂಸದರಾಗಿದ್ದಾರೆ. 2018ರ ತನಕ ಟಿಎಂಸಿ ಯುವ ಘಟಕದ ನಾಯಕರಾಗಿದ್ದ ಅವರನ್ನು ಪಂಚಾಯತ್ ಚುನಾವಣೆಗಳಿಗೆ ಮುನ್ನ ಪಕ್ಷ ವಿರೋಧ ಚಟುವಟಿಕೆಗಳಿಗಾಗಿ ಪಕ್ಷದಿಂದ ವಜಾಗೊಳಿಸಲಾಗಿತ್ತು. ಅವರ ವಿರುದ್ಧ 11 ಕ್ರಿಮಿನಲ್ ಪ್ರಕರಣಗಳೂ ಇವೆ.

ಗೃಹ ವ್ಯವಹಾರಗಳ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಈ ಹಿಂದೆ ಇದ್ದ ಮಾಹಿತಿಯಂತೆ ಪ್ರಾಮಾಣಿಕ್ ಅವರು ಬಿಎ (ಹಾನರ್ಸ್) ಪದವಿಯನ್ನು ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ವಿವಿಯ ಆರ್ ಎನ್ ಡಿಗ್ರಿ ಕಾಲೇಜಿನಿಂದ ಪಡೆದಿದ್ದರು.

ಅವರ ಪರಿಚಯದಲ್ಲಿ ಅವರು ಕೂಚ್‍ಬಿಹಾರ್ ನ ಭೇಟಗುರಿ ಲಾಲ್ ಬಹಾದುರ್ ಶಾಸ್ತ್ರಿ ವಿದ್ಯಾಪೀಠದಲ್ಲಿ ಶಿಕ್ಷಣ ಪಡೆದಿದ್ದರು. ಆದರೆ ಇಲ್ಲಿ 12ನೇ ತರಗತಿ ತನಕ ಮಾತ್ರ  ಶಿಕ್ಷಣ ಒದಗಿಸಲಾಗುತ್ತಿದೆ.

ಪ್ರಾಮಾಣಿಕ್ ಅವರು 2021 ವಿಧಾನಸಭಾ ಚುನಾವಣೆ ಸಂದರ್ಭ ಸಲ್ಲಿಸಿದ್ದ  ಅಫಿಡವಿಟ್‍ನಲ್ಲಿ ಹತ್ತನೇ ತರಗತಿಯನ್ನು ಅವರ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಎಂದು ನಮೂದಿಸಲಾಗಿತ್ತು. ತರುವಾಯ ಲೋಕಸಭಾ ವೆಬ್‍ಸೈಟ್‍ನಲ್ಲಿ ಅವರು ಬಿಸಿಎ (ಕಂಪ್ಯೂಟರ್ ಅಪ್ಲಿಕೇಶನ್ಸ್) ಪದವೀಧರ ಎಂದು ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News