ದಿಲ್ಲಿ ಪೊಲೀಸ್ ಮುಖ್ಯಸ್ಥರಾಗಿ ರಾಕೇಶ್ ಅಸ್ತಾನ ನೇಮಕಾತಿ ವಿರೋಧಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

Update: 2021-08-02 11:14 GMT

ಹೊಸದಿಲ್ಲಿ : ನಿವೃತ್ತಿಗಿಂತ ಕೇವಲ ಮೂರು ದಿನಗಳಿಗೆ ಮುನ್ನ ಮಾಜಿ ಸಿಬಿಐ ಅಧಿಕಾರಿ ರಾಕೇಶ್ ಅಸ್ತಾನ ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ಸರಕಾರ ನೇಮಕಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಎಂ ಎಲ್ ಶರ್ಮ ಎಂಬ ವಕೀಲರು ಸಲ್ಲಿಸಿರುವ  ಅರ್ಜಿಯ ವಿಚಾರಣೆಯನ್ನು   ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹಾಗೂ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ದ್ವಿಸದಸ್ಯ ಪೀಠ ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಕನಿಷ್ಠ ಎರಡು ವರ್ಷ ಸೇವಾವಧಿ ಬಾಕಿಯಿರುವ ಅಧಿಕಾರಿಗಳನ್ನಷ್ಟೇ  ಕೇಂದ್ರ ಲೋಕಸೇವಾ ಆಯೋಗ ನೇಮಿಸಬೇಕೆಂಬ 2018ರ ಸುಪ್ರೀಂ ಕೋರ್ಟ್ ತೀರ್ಪನ್ನು ಆಸ್ಥಾನ ಅವರ ನೇಮಕಾತಿಯಲ್ಲಿ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಗೃಹ ಸಚಿವಾಲಯದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದೂ ಅವರು  ಮನವಿ ಮಾಡಿದ್ದಾರೆ.

"ಸಾರ್ವಜನಿಕ ಹಿತದೃಷ್ಟಿ" ಯಿಂದ ಆಸ್ತಾನ ಅವರಿಗೆ ಒಂದು ವರ್ಷ ಸೇವಾವಧಿ ವಿಸ್ತರಣೆ ನೀಡಿ ನಿವೃತ್ತಿಗೆ ಇನ್ನೇನು ಮೂರು ದಿನಗಳಿವೆಯೆನ್ನುವಾಗ ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ಕಳೆದ ವಾರ ಕೇಂದ್ರ ಗೃಹ ಸಚಿವಾಲಯ ನೇಮಿಸಿತ್ತು.

ಆಸ್ತಾನ ಅವರನ್ನು ಸಿಬಿಐ ನಿರ್ದೇಶಕರನ್ನಾಗಿಸಬೇಕೆಂದು ಸರಕಾರ  ಈ ಹಿಂದೆ ಬಯಸಿದ್ದರೂ ಹಾಗೂ ಸರಕಾರ ಸಿದ್ಧಪಡಿಸಿದ್ದ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಮೊದಲ ಸ್ಥಾನದಲ್ಲಿದ್ದರೂ ಸುಪ್ರೀಂ ಕೋರ್ಟಿನ ತೀರ್ಪನ್ನು ಉನ್ನತಾಧಿಕಾರ ಸಮಿತಿಯ ಸದಸ್ಯರಲ್ಲೊಬ್ಬರಾಗಿದ್ದ ಸಿಜೆಐ ಅವರು ಉಲ್ಲೇಖಿಸಿದ್ದರಿಂದ ಆಸ್ಥಾನ ಅವರಿಗೆ ಆ ಹುದ್ದೆ ತಪ್ಪಿ ಹೋಗಿತ್ತು.

ಪೊಲೀಸ್ ಮುಖ್ಯಸ್ಥರ ಹುದ್ದೆಗೆ ನೇಮಕಗೊಳ್ಳಲು ಆರು ತಿಂಗಳ ಸೇವಾವಧಿ ಬಾಕಿಯಿರುವವರನ್ನು ನೇಮಿಸಬಾರದೆಂಬ ಸುಪ್ರೀಂ ಕೋರ್ಟಿನ ಈ ಹಿಂದಿನ ಸೂಚನೆಯನ್ನು ಸರಕಾರಕ್ಕೆ ನೆನಪಿಸಲಾಗಿದ್ದರಿಂದ ಸರಕಾರ ಆಸ್ಥಾನ ಅವರನ್ನು ದಿಲ್ಲಿ ಪೊಲೀಸ್ ಮುಖ್ಯಸ್ಥರನ್ನಾಗಿಸುವುದಿಲ್ಲವೆಂದೇ ನಂಬಲಾಗಿತ್ತು.

ಅಸ್ತಾನ ಅವರ ನೇಮಕಾತಿಯನ್ನು ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಈಗಾಗಲೇ ಟೀಕಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News