ಒಲಿಂಪಿಕ್ಸ್‌ ನಲ್ಲಿ ಇತಿಹಾಸ ಸೃಷ್ಟಿಸಿದ ಕ್ಷಣ: ತನ್ನ ಎದುರಾಳಿಯೊಂದಿಗೆ ಚಿನ್ನದ ಪದಕ ಹಂಚಿಕೊಂಡ ಕತರ್ ಅಥ್ಲೀಟ್‌

Update: 2021-08-02 14:38 GMT

ಟೋಕಿಯೋ : ಹೈಜಂಪ್ ಆಟಗಾರರಾದ ಕತಾರ್ ನ  ಮುತಾಝ್ ಬರ್ಷಿಮ್ ಹಾಗೂ ಇಟಲಿಯ ಗಿಯಾನ್‍ಮಾರ್ಕೊ‌ ತಂಬೇರಿ 2017ರಿಂದ ಸ್ನೇಹಿತರಾಗಿದ್ದು, ಟೋಕಿಯೋ ಒಲಿಂಪಿಕ್ಸ್ ನಲ್ಲಿ ರವಿವಾರ ಇವರಿಬ್ಬರ ನಡುವೆ ನಡೆದ ಹೈಜಂಪ್ ಫೈನಲ್  ಸಮಬಲ ಆದಾಗ ಕತರ್ ನ  ಬರ್ಷಿಮ್‌ ಚಿನ್ನದ ಪದಕವನ್ನು ಹಂಚಿಕೊಳ್ಳಲು ನಿರ್ಧರಿಸಿ ತಮ್ಮ ಸ್ನೇಹದ ಇನ್ನೊಂದು ಮೈಲಿಗಲ್ಲು ತಲುಪಿದ್ದಾರೆ. ಇದು ಒಲಿಂಪಿಕ್ಸ್‌ ಇತಿಹಾಸದಲ್ಲೇ ಅಭೂತಪೂರ್ವ ಕ್ಷಣವಾಗಿದೆ ಎಂದು ಕ್ರೀಡಾತಜ್ಞರು ಬಣ್ಣಿಸಿದ್ದಾರೆ.

ಹೈಜಂಪ್‌ ಪಂದ್ಯಾಟದಲ್ಲಿ ಇಬ್ಬರೂ 2.37 ಮೀಟರ್ ತನಕ ಜಿಗಿದು ಸಮಾನ ಪ್ರದರ್ಶನ ನೀಡಿದ್ದರು. ತಮ್ಮ ಮೂರು ಬಾರಿಯ ಪ್ರಯತ್ನಗಳಲ್ಲಿ ಅವರಿಬ್ಬರೂ ವಿಫಲರಾಗಿದ್ದರು. ಕೊನೆಗೆ ಒಲಿಂಪಿಕ್ಸ್ ನ ಈ ಹಿಂದಿನ ದಾಖಲೆಯ ಎತ್ತರಕ್ಕೆ (2.39 ಮೀಟರ್)ಗೆ ಬಾರ್ ಏರಿಸಿದಾಗ ಇಬ್ಬರೂ ಮೂರು ಪ್ರಯತ್ನಗಳಲ್ಲೂ ಅಷ್ಟು ಎತ್ತರಕ್ಕೆ ಹಾರಲು ವಿಫಲರಾಗಿದ್ದರು.

ಕೊನೆಗೆ ಅಧಿಕಾರಿಗಳು ಇಬ್ಬರಿಗೂ ಈ ಟೈ-ಬ್ರೇಕ್‍ಗಾಗಿ ಜಂಪ್-ಆಫ್ ಆಯ್ಕೆಯನ್ನು ನೀಡಿದ್ದರು.‌ ತಂಬೇರಿ ಅದಾಗಲೇ ಗಾಯದ ಸಮಸ್ಯೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಸಹಜವಾಗಿ ಮುತಾಝ್‌ ಚಿನ್ನದ ಪದಕಕ್ಕೆ ಅರ್ಹರಾಗಿದ್ದರು. ಆದರೆ ಕೂಡಲೇ ಮುತಾಝ್ ಅಧಿಕಾರಿಗಳ ಬಳಿ ತೆರಳಿ,  "ನಾನೂ ಪಂದ್ಯದಿಂದ ಹಿಂದೆ ಸರಿದರೆ ಪಂದ್ಯ ಸಮಬಲವಾಗುತ್ತದೆ. ಆಗ ಇಬ್ಬರಿಗೂ ಎರಡು ಚಿನ್ನದ ಪದಕಗಳನ್ನೇಕೆ ನೀಡಬಾರದು?" ಎಂದು  ಕೇಳಿದಾಗ ಅಧಿಕಾರಿಗಳು ಒಪ್ಪಿದರು. ತಂಬೇರಿ ಕೂಡ ಸಂತಸದಿಂದಲೇ ಒಪ್ಪಿದಾಗ ಇಬ್ಬರು ಸ್ನೇಹಿತರ ಗಾಢಾಲಿಂಗನ ಅಲ್ಲಿದ್ದವರೆಲ್ಲರಿಗೂ ಖುಷಿ ನೀಡಿತು.

"ಇಲ್ಲಿ ಬಂದು ಇಂತಹ ನಿರ್ವಹಣೆಯೊಂದಿಗೆ ನಾನು ಚಿನ್ನಕ್ಕೆ ಅರ್ಹ, ಆತ ಕೂಡ ಹಾಗೆಯೇ ನಿರ್ವಹಿಸಿದ್ದಾರೆ ಹಾಗೂ ಚಿನ್ನಕ್ಕೆ ಅರ್ಹರು. ಇದು ಕ್ರೀಡೆಗೆ ಮಿಗಿಲಾದ ಭಾವುಕತೆ," ಎಂದು ಬರ್ಷಿಮ್ ಹೇಳಿದರು. ಬರ್ಷಿಮ್ ಅವರು 2012ರ ಲಂಡನ್ ಒಲಿಂಪಿಕ್ಸ್‍ನಲ್ಲಿ ಕಂಚು ಗೆದ್ದಿದ್ದರೆ ರಿಯೋ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು.

ತಮಗೂ ಚಿನ್ನದ ಪದಕ ದೊರೆತದ್ದನ್ನು ನಂಬಲಾಗದೇ ಭಾವುಕರಾದ ತಂಬೇರಿಸ್‌ ಉನ್ಮಾದದಲ್ಲಿ ತೇಲಿದರು. ಪಂದ್ಯ ವೀಕ್ಷಿಸಲು ನೆರದಿದ್ದವರೂ ಈ ಅಪರೂಪದ ದೃಶ್ಯ ಕಂಡು ಕಣ್ಣೀರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News