ಉದ್ಯೋಗವಿಲ್ಲದೆ ನೊಂದು ಸಾವಿಗೆ ಶರಣಾದವರ ಸಂಖ್ಯೆ ನಾಲ್ಕು ವರ್ಷಗಳಲ್ಲಿ ಶೇ.24 ಏರಿಕೆ

Update: 2021-08-02 17:51 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ ,ಆ.2: 2016ರಿಂದ 2019ರವರೆಗಿನ ಅವಧಿಯಲ್ಲಿ ಭಾರತದಲ್ಲಿ ನಿರುದ್ಯೋಗದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲಿ ಶೇ.24ರಷ್ಟು ಏರಿಕೆಯಾಗಿದೆಯೆಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಬಿ) ದತ್ತಾಂಶಗಳು ಬಹಿರಂಗಪಡಿಸಿವೆ. 2019ರಲ್ಲಿ ದೇಶದಲ್ಲಿ ನಿರುದ್ಯೋಗದಿಂದ ಬೇಸತ್ತು 2851 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2016ರಲ್ಲಿ ಇದೇ ಕಾರಣಕ್ಕಾಗಿ ಸಾವಿಗೆ ಶರಣಾದವರ ಸಂಖ್ಯೆ 2298 ಆಗಿತ್ತು.

  2019ರ ಸಾಲಿನಲ್ಲಿ ನಿರುದ್ಯೋಗದ ಕಾರಣದಿಂದಾಗಿ ಕರ್ನಾಟಕದಲ್ಲಿ 553 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಮಹಾರಾಷ್ಟ್ರ (452) ಹಾಗೂ ತಮಿಳುನಾಡು (251) ತದನಂತರದ ಸ್ಥಾನಗಳಲ್ಲಿವೆ.


ದೇಶದಲ್ಲಿ ಕೋವಿಡ್ ಅಪ್ಪಳಿಸುವ ಮುಂಚಿನ ದತ್ತಾಂಶಗಳು ಇವಾಗಿವೆ. ಆದರೆ ಕೊರೋನ ಸೋಂಕಿನ ಆನಂತರದ ತಿಂಗಳುಗಳಲ್ಲಿ ಭಾರೀ ಸಂಖ್ಯೆಯ ಉದ್ಯೋಗಗಳು ನಷ್ಟವಾಗಿರುವುದರಿಂದ 2020ರಲ್ಲಿಯೂ ಆತ್ಮಹತ್ಯೆಯ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿರುವ ಸಾಧ್ಯತೆಯಿದೆಯೆಂದು ವರದಿಗಳು ತಿಳಿಸಿವೆ. ಕೋವಿಡ್ ಎರಡನೆ ಅಲೆಯ ಕಾರಣದಿಂದಾಗಿ ಭಾರತದಲ್ಲಿ 1 ಕೋಟಿಗೂ ಅಧಿಕ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಸುಮಾರು ಶೇ.97ರಷ್ಟು ಕುಟುಂಬಗಳ ಆದಾಯದಲ್ಲಿ ಕುಸಿತವಾಗಿದೆಯೆಂದು ಭಾರತೀಯ ಆರ್ಥಿಕತೆಯ ಕಣ್ಗಾವಲು ಕೇಂದ್ರ ( ಸಿಎಂಐಇ)ದ ಮುಖ್ಯ ಕಾರ್ಯ ನಿರ್ವಾಹಕ ಮಹೇಶ್ ವ್ಯಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News