ರಾಜ್ಯದ ಸ್ಥಾನಮಾನಕ್ಕಾಗಿ ಲಡಾಕ್ ನಾಯಕರ ಒಕ್ಕೊರಲ ಆಗ್ರಹ: 370ನೇ ವಿಧಿಯ ಮರುಸ್ಥಾಪನೆಗೂ ಬೇಡಿಕೆ

Update: 2021-08-02 17:52 GMT

ಲೇಹ್,ಆ.2: ಕೇಂದ್ರ ಸರಕಾರವು ಲಡಾಕ್ ಗೆ ವಿಧಾನಸಭೆಯನ್ನು ಹೊಂದಿರುವಂತಹ ಪೂರ್ಣಮಟ್ಟದ ರಾಜ್ಯದ ಸ್ಥಾನಮಾನ ನೀಡಬೇಕೆಂದು ಲಡಾಕ್ ನ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಲಡಾಕ್ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ್ದ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸುವ ಮೂಲಕ ಲಡಾಕ್ ನಾಯಕರು ತಮ್ಮ ಹಿಂದಿನ ನಿಲುವಿನಿಂದ ಸಂಪೂರ್ಣವಾಗಿ ಹಿಂದೆ ಸರಿದಂತಾಗಿದೆ.

    2019ರ ಆಗಸ್ಟ್ 5ರಂದು ಜಮ್ಮಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ತಿದ್ದುಪಡಿ ರದ್ದತಿಯ ಎರಡನೆ ವರ್ಷಾಚರಣೆಗೆ ನಾಲ್ಕು ದಿನ ಮಂಚಿತವಾಗಿ ಲೇಹ್ ನಲ್ಲಿ ನಡೆದ ಸಮಾವೇಶದಲ್ಲಿ ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಲೇಹ್ ಹಾಗೂ ಕಾರ್ಗಿಲ್ ಪ್ರಾಂತಗಳ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಹಲವಾರು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದರು.

   2019ರ ಆಗಸ್ಟ್ 5ರಂದು ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಸಂದರ್ಭದಲ್ಲಿ ಲಡಾಕ್ ನ ನಾಯಕರು ಮೋದಿ ಸರಕಾರದ ಈ ನಡೆಯನ್ನು ಸ್ವಾಗತಿಸಿದ್ದರು.

ರವಿವಾರ ನಡೆದ ಸಮಾವೇಶದಲ್ಲಿ ಭಾಷಣದ ಮಾಡಿದ ನಾಯಕರು ಲಡಾಕ್ ಗೆ ಕೇಂದ್ರಾಡಳಿತ ಸ್ಥಾನಮಾನ ನೀಡಿರುವುದನ್ನು ತಿರಸ್ಕರಿಸಿದರಲ್ಲದೆ, 370ನೇ ವಿಧಿಯಡಿ ಲಡಾಕ್ ನ ಜನತೆಗೆ ಖಾತರಿಪಡಿಸಲಾಗಿದ್ದ ನೆಲ, ಉದ್ಯೋಗಗಳು, ಸಂಸ್ಕೃತಿ ಹಾಗೂ ಭಾಷೆಗಳ ಸಂರಕ್ಷಣೆಯಾಗಬೇಕೆಂದು ಕರೆ ನೀಡಿದರು.

  ಲಡಾಕ್ನಿಂದ ಲೋಕಸಭೆಗೆ ಎರಡು ಸ್ಥಾನಗಳಲ್ಲದೆ, ಪ್ರತ್ಯೇಕ ಶಾಸನಸಭೆಗಳ ಸ್ಥಾಪನೆಯಾಗಬೇಕೆಂದೂ ಅವರು ಆಗ್ರಹಿಸಿದರು. ಆಗಸ್ಟ್ 5ರಂದು ಲಡಾಕ್ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾಮಾನವನ್ನು ನೀಡಲಾಯಿತಾದರೂ, ವಿಧಾನಸಭೆಯನ್ನು ನೀಡಿರಲಿಲ್ಲ.

 ರವಿವಾರ ಸಮಾವೇಶದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಲಡಾಕ್ನ ಜನತಾಚಳವಳಿಯ ಉನ್ನತ ಸಮಿತಿಯ ಅಧ್ಯಕ್ಷ ತುಪ್ಸ್ಟನ್ ಚೆವಾಂಗ್ ಹಾಗೂ ಕಾರ್ಗಿಲ್ ಪ್ರಜಾತಾಂತ್ರಿಕ ಮೈತ್ರಿಕೂಟದ ಉಪಾಧ್ಯಕ್ಷ ಆಸ್ಗರ್ ಅಲಿ ಕರ್ಬಾಲಿ ಮಾತನಾಡಿದರು.‘‘ ಸಂವಿಧಾನದ 371ನೇ ವಿಧಿ ಹಾಗೂ ಆರನೇ ಪರಿಚ್ಚೇದದಡಿ ನಮ್ಮ ನೆಲ ಹಾಗೂ ಉದ್ಯೋಗಗಳಿಗೆ ರಕ್ಷಣೆಯ ಅಗತ್ಯವಿದೆಯೆಂದು ಅವರು ಹೇಳಿದರು. ಲಡಾಕ್ಗೆ ಎರಡು ಲೋಕಸಭಾ ಕ್ಷೇತ್ರಗಳನ್ನು ನೀಡಬೇಕೆಂದು ಅವರು ಆಗ್ರಹಿಸಿದರು..

 ಸಮಾವೇಶದಲ್ಲಿ ಭಾಗವಹಿಸಿದ್ದ ಗುಫ್ಕರ್ ಮೈತ್ರಿಕೂಟದ ಕಾರ್ಗಿಲ್ ಪ್ರಾಂತ ನಾಯಕರುಗಳು ಸಂವಿಧಾನದ 370ನೇ ವಿಧಿಯ ಮರುಸ್ಥಾಪನೆಗೆ ಆಗ್ರಹಿಸಿದರು.ಕಾರ್ಗಿಲ್ ಪ್ರಜಾತಾಂತ್ರಿಕ ಮೈತ್ರಿಕೂಟದಂತಹ ಕೆಲವು ಕಾಶ್ಮೀರಿ ಪಕ್ಷಗಳು ಸಂವಿಧಾನದ 370ನೇ ವಿಧಿ ರದ್ದತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News