ಪೆಗಾಸಸ್ ಹಗರಣ: ರಾಹುಲ್ ನೇತೃತ್ವದಲ್ಲಿ ವಿಪಕ್ಷ ಸಭೆ

Update: 2021-08-02 17:53 GMT

ಹೊಸದಿಲ್ಲಿ,ಆಗಸ್ಟ್ 2: ಪೆಗಾಸಸ್ ಬೇಹುಗಾರಿಕೆ ಹಗರಣಕ್ಕೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಸದಸ್ಯರ ನಡುವಿನ ವಾಗ್ವಾದಗಳಿಂದಾಗಿ ಸಂಸತ್‌ ನ ಮುಂಗಾರು ಅಧಿವೇಶನದ ಕಲಾಪಗಳು ವ್ಯರ್ಥವಾಗುತ್ತಿರುವಂತೆಯೇ, ಮಂಗಳವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿವಿಧ ಪ್ರತಿಪಕ್ಷಗಳ ಸಭೆ ನಡೆಯಲಿದೆ.

   ಪೆಗಾಸಸ್ ಹಗರಣವನ್ನು ಖಂಡಿಸಿ, ಪ್ರತಿಪಕ್ಷಗಳ ಸಂಸತ್ಭವನದ ಹೊರಾವರಣದಲ್ಲಿ ಅಣಕು ಸಂಸತ್ ನಡೆಸಲು ನಿರ್ಧರಿಸಿವೆ. ಪೆಗಾಸಸ್ ಹಗರಣಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ಅಹವಾಲನ್ನು ಸಾರ್ವಜನಿಕರಿಗೆ ತಲುಪಿಸಲು ಕೇಂದ್ರ ಸರಕಾರ ಅವಕಾಶ ನೀಡುತ್ತಿಲ್ಲ ಹಾಗೂ ಕೇವಲ ಒಂದರ ಆನಂತರ ಒಂದರಂತೆ ವಿಧೇಯಕಗಳನ್ನು ಸದನದಲ್ಲಿ ಅಂಗೀಕರಿಸುತ್ತಲೇ ಇದೆ ಎಂದು ಪ್ರತಿಪಕ್ಷಗಳು ಆಪಾದಿಸಿವೆ.

ಪೆಗಾಸಸ್ ಹಗರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಆ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.

  ಜುಲೈ 19ರಂದು ಮುಂಗಾರು ಅಧಿವೇಶನ ಆರಂಭಗೊಂಡಾಗಿನಿಂದ ಸಂಸತ್ ನಲ್ಲಿ ಈವರೆಗೆ ಸಂಭಾವ್ಯ 107 ತಾಸುಗಳ ಪೈಕಿ ಕೇವಲ 18 ತಾಸುಗಳಷ್ಟೇ ಕಾರ್ಯನಿರ್ವಹಿಸಿದೆ. 

ಸಂಸತ್ ಕಲಾಪಗಳು ವ್ಯರ್ಥಗೊಂಡ ಪರಿಣಾಮವಾಗಿ ತೆರಿಗೆಆದರರ 133 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣ ವ್ಯರ್ಥವಾಗಿದೆ.

 ಸಂಸತ್‌ ನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯು ಈವರೆಗಿನ ಕಲಾಪ ನಡೆಯುವ ಸಂಭಾವ್ಯ 54 ತಾಸುಗಳ ಪೈಕಿ ಕೇವಲ 7 ತಾಸುಗಳ ಕಾಲವಷ್ಟೇ ಕಾರ್ಯನಿರ್ವಹಿಸಿದ್ದರೆ, ರಾಜ್ಯಸಭೆಯು ನಿಗದಿತ 53 ತಾಸುಗಳ ಪೈಕಿ 11 ತಾಸುಗಳ ಕಾಲವಷ್ಟೇ ಕಾರ್ಯನಿರ್ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News