ಉದ್ಯೋಗದ ಹುಡುಕಾಟದಲ್ಲಿ ಕಳೆದು ಹೋಗುತ್ತಿರುವವರು

Update: 2021-08-03 07:53 GMT

ಭಾರತದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಸದಾ ಕಾಡುತ್ತಿರುವ ನಿರುದ್ಯೋಗವೆಂಬ ಪಿಡುಗನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲು ಸರಕಾರಗಳು ವಿವಿಧ ಕ್ರಮಗಳನ್ನು ಕೈಗೊಂಡರೂ ನಿರುದ್ಯೋಗ ಸಮಸ್ಯೆ ಮಾತ್ರ ಇಂದಿಗೂ ಜ್ವಲಂತ ಸಮಸ್ಯೆಯಾಗಿ ಬೆಳೆಯುತ್ತಲೇ ಇದೆ. ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಯುವಜನರ ಸಂಖ್ಯೆಯೇ ಅಧಿಕವಿರುವುದರಿಂದ ಜಾಗತಿಕ ವಲಯದಲ್ಲಿ ಭಾರತ ‘ಯುವ ದೇಶ’ ಎನ್ನಲಾಗುತ್ತಿದೆ.

ಮೊದಲೆಲ್ಲ ಊರಿಗೊಬ್ಬ ಸ್ನಾತಕೋತ್ತರ ಪದವೀಧರ ಅಥವಾ ಡಾಕ್ಟರ್, ಇಂಜಿನಿಯರ್ ಕಾಣಿಸುತ್ತಿದ್ದರು. ಅವರಿಗೆ ಆಗ ವಿಶೇಷ ಗೌರವವಿತ್ತು. ಆದರೆ ಹಾದಿ ಬೀದಿಗಳಲ್ಲಿ ಡಾಕ್ಟರ್, ಇಂಜಿನಿಯರ್ ಪದವಿ ಪಡೆದವರು ಕಾಣಿಸಿಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಹೆಚ್ಚಿನ ಸ್ಪರ್ಧೆ ಆರಂಭವಾಗಿದೆ. ನಮ್ಮ ದೇಶದಲ್ಲಿ ಶೇ. 60ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಆಧುನಿಕ ಯುಗದಲ್ಲಿ ಎಲ್ಲೆಡೆ ತಂತ್ರಜ್ಞಾನದ ಗಾಳಿ ಬೀಸಿರುವುದರಿಂದ ಕೃಷಿ ಕೇತ್ರದಲ್ಲೂ ನಿರುದ್ಯೋಗ ಆರಂಭವಾಗಿದೆ.

ಭಾರತದಲ್ಲಿ ನಿರುದ್ಯೋಗಿಗಳ ಜನಸಂಖ್ಯೆ ಹೆಚ್ಚುತ್ತಿದೆ. ಅವರಲ್ಲಿ ವಿದ್ಯಾವಂತರು, ಕೌಶಲ್ಯ ಹೊಂದಿರುವವರು, ಗ್ರಾಮಿಣ ಮತ್ತು ನಗರ ವಾಸಿಗಳು ಸೇರಿದ್ದಾರೆ. ಸ್ವಾತಂತ್ರದ ನಂತರ 1951ರಲ್ಲಿ ಒಟ್ಟು ನಿರುದ್ಯೋಗಿಗಳ ಜನಸಂಖ್ಯೆಯು ಸುಮಾರು 5 ಮಿಲಿಯನ್ ಗಳಷ್ಟಿತ್ತು. 2009-10ರ ವೇಳೆ ಭಾರತವೂ ಸೇರಿ 123 ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕಿದ ಸಮಯದಲ್ಲಿ, ದೇಶದಲ್ಲಿ ಒಟ್ಟು 468.8 ಮಿಲಿಯನ್ ಶ್ರಮಶಕ್ತಿಯಲ್ಲಿ 9.2 ಮಿಲಿಯನ್ ಅಂದರೆ ಶೇ. 2ರಷ್ಟು ನಿರುದ್ಯೋಗಿಗಳಿದ್ದರು. (NSSO ಪ್ರಕಾರ)

ಇಂದಿನ ಅರ್ಥಶಾಸ್ತ್ರಜ್ಞರು ದೇಶದ ಜನಸಂಖ್ಯೆ ಉಲ್ಬಣಗೊಳ್ಳುತ್ತಿದ್ದರೂ ನಮ್ಮ ದೇಶದ ಯುವಜನತೆ ಶಿಕ್ಷಿತರಾಗಿ ಮತ್ತು ಸ್ವಾವಲಂಬಿಗಳಾಗಿ ದುಡಿಯಲು ಆರಂಭಿಸಿದರೆ, ದೇಶ ಅಭಿವೃದ್ಧಿಯ ಹಳಿಗೆ ಬರಬಹುದೆಂಬ ಆಶಾವಾದ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ದೇಶದ ಭವಿಷ್ಯ ಮತ್ತು ಅಭಿವೃದ್ಧಿ ಯುವ ಪಿಳಿಗೆಯ ಕೈಯಲ್ಲಿದೆ ಎಂದಿದ್ದಾರೆ.

ಕೊರೋನ ನಡುವೆ ಕಳೆದು ಹೋದ ಉದ್ಯೋಗಗಳು

ಭಾರತದಲ್ಲಿ ಇತ್ತೀಚೆಗೆ, ‘ಸೆಂಟರ್ ಫಾರ್ ದಿ ಮಾನಿಟರಿಂಗ್ ಇಂಡಿಯನ್ ಎಕನಾಮಿ-ಸಿಎಂಐಇ’ ಉದ್ಯೋಗಗಳ ಬಗ್ಗೆ ಕೊಟ್ಟಿರುವ ದತ್ತಾಂಶಗಳ ಪ್ರಕಾರ ದೇಶದಲ್ಲಿ 2020, ಮಾರ್ಚ್ ಅಂತ್ಯಕ್ಕೆ 8.59 ಕೋಟಿ ಜನ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. 2021ರ ಮಾರ್ಚ್ ಅಂತ್ಯಕ್ಕೆ ಸುಮಾರು 98 ಲಕ್ಷ ಮಂದಿ ನಿರುದ್ಯೋಗದಲ್ಲಿ ಪರಿತಪಿಸುತ್ತಿದ್ದಾರೆ.

ಉದ್ಯೋಗದಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ

ಇತ್ತೀಚೆಗೆ ಮಧ್ಯ ಪ್ರದೇಶ ಸರಕಾರದ ಎಲ್ಲಾ ಹುದ್ದೆಗಳು ಸ್ಥಳೀಯರಿಗೆ ಮೀಸಲಿಡಲಾಗುತ್ತದೆ ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ಚೌಹಾಣ್ ಹೇಳಿದ್ದರು. ಅಲ್ಲದೆ ಹರ್ಯಾಣ ಮತ್ತು ಆಂಧ್ರ ಪ್ರದೇಶದಲ್ಲೂ ಖಾಸಗಿ ಉದ್ಯಮ ವಲಯದ ಉದ್ಯೋಗಗಳಲ್ಲಿ ಶೇ. 75ರಷ್ಟು ಮಿಸಲಾತಿಯನ್ನು ಸ್ಥಳೀಯರಿಗೆ ಕಲ್ಪಿಸಲು ಮುಂದಾಗಿವೆ ಮತ್ತು ಮಹಾರಾಷ್ಟ್ರದಲ್ಲೂ ಈ ವಿಷಯ ಚರ್ಚೆಯಲ್ಲಿದೆ. ಈ ತರಹದ ಉದ್ಯೋಗಗಳ ಮೀಸಲಾತಿಯು ಕರ್ನಾಟಕದಲ್ಲಿಯೂ ಆಗಬೇಕಿದೆ. ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ -ಸಿಎಸ್‌ಡಿಎಸ್’ ವತಿಯಿಂದ 2016ರಲ್ಲಿ ದೇಶದ 19 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದಾಗ ಶೇ. 63ರಷ್ಟು ಜನ ಸ್ಥಳೀಯರಿಗೆ ಮೀಸಲಾತಿಯನ್ನು ನೀಡುವುದಕ್ಕೆ ಅನುಮತಿಸಿದ್ದರು. ಹಾಗಾದಾಗ ಆಯಾ ರಾಜ್ಯದ ಭಾಷೆಗಳ ಬೆಳವಣಿಗೆಗೂ ಸಹಾಯವಾಗುತ್ತದೆ. ಅಲ್ಲದೆ ಮುಖ್ಯವಾಗಿ ಈ ತರಹದ ಆಶ್ವಾಸನೆಗಳು ಬರೀ ಚುನಾವಣೆ ಸಂದರ್ಭದಲ್ಲಿ ಮಾತ್ರ ನೀಡದೆ, ಕಾರ್ಯರೂಪಕ್ಕೆ ತಂದು ಎಲ್ಲಾ ಸಮಯದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ನೀಡಲು ಪ್ರಯುತ್ನಿಸಿದಲ್ಲಿ ಇದರಿಂದಾಗಿ ಅಂತರ್‌ರಾಜ್ಯ ವಲಸೆಯನ್ನೂ ತಡೆಯಬಹುದಾಗಿದೆ.

ಸ್ವದೇಶಿ ಪ್ರತಿಭೆಗಳ ವಿದೇಶ ಹಾರಾಟ

ಇಂದಿನ ಯುವ ಜನತೆಯು ಭಾರತದಲ್ಲಿ ಹುಟ್ಟಿ ಬೆಳೆದು ಭಾರತದಲ್ಲೇ ಶಿಕ್ಷಣ ಪಡೆದು, ಹಲವಾರು ಯೋಚನೆ, ಯೋಜನೆಗಳನ್ನು ಹೊತ್ತು, ಹೆಚ್ಚಿನ ಮಟ್ಟದ ಆದಾಯಗಳಿಸುವ ಮೂಲ ಉದ್ದೇಶದಿಂದ ಬೇರೆ ದೇಶಗಳಲ್ಲಿ ತಮ್ಮ ಯೋಚನೆ, ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದರಿಂದಾಗಿ ಅಲ್ಲಿನ ಜನರಿಗೆ ಉದ್ಯೋಗಗಳನ್ನು ಕಲ್ಪಿಸಿಕೊಡುತ್ತಿದ್ದಾರೆ ಮತ್ತು ಆ ದೇಶದ ಅಭಿವೃದ್ಧಿಗೆ ಪೂರಕವಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಉದ್ಯೋಗಗಳ ಕೊರತೆ ಹೇರಳವಾಗಿ ಕಂಡು ಬರುವುದಕ್ಕೆ ಇದೂ ಒಂದು ಕಾರಣವಾಗಿದೆ. ವಿದೇಶಿ ಡಾಲರ್‌ಗಳು ಭಾರತದಲ್ಲಿ ರೂಪಾಯಿಗಳಿಗೆ ಬದಲಾದಾಗ ಹೆಚ್ಚಿನ ಆದಾಯ ಬರುವುದೆಂಬ ಕಾರಣದಿಂದ ಇಲ್ಲಿಯ ಶಿಕ್ಷಿತರು ವಿದೇಶಕ್ಕೆ ಹೊರಡುತ್ತಿರುವುದು ಭಾರತೀಯರ ಪ್ರತಿಭಾ ಪಲಾಯನಕ್ಕೆ ಕಾರಣವಾಗಿದೆ.

20-29ರ ವಯಸ್ಸಿನ ನಿರುದ್ಯೋಗಿಗಳೇ ಹೆಚ್ಚೇಕೆ?

ಪ್ರೌಢ ಜೀವನದ ನಿರ್ಣಾಯಕ ಹಂತದಲ್ಲಿ ಬಹುತೇಕ ಯುವಕ, ಯುವತಿಯರು ಕೆಲಸ ಮಾಡಲು ಮನಸ್ಸಿದ್ದರೂ ಕೆಲಸವಿಲ್ಲದೆ ಯೋಚನೆ ಮಾಡುತ್ತಾ ಸುಮ್ಮನಿದ್ದಾರೆ. ಇದರಿಂದಾಗಿ ದೇಶದ ಅಮೂಲ್ಯ ಯುವ ಸಂಪತ್ತು ವ್ಯರ್ಥವಾಗುತ್ತಿದೆ. 2011ರ ಜನಗಣತಿಯ ಪ್ರಕಾರ 1.20 ಕೋಟಿ ಯುವಕ, ಯುವತಿಯರು ಕೆಲಸವಿಲ್ಲದೆ ಸಮಯ ಕಳೆಯುತ್ತಿದ್ದಾರೆ ಎಂದು ತಿಳಿಸಿತ್ತು. ಒಂದೆಡೆ ಭಾರತವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವೆಂದು ಕರೆಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಏರುತ್ತಿದೆ. ಪ್ರಸ್ತುತ ಸಮಾಜದಲ್ಲಿ ಬದುಕಲು ಹಲವಾರು ದಾರಿಗಳಿವೆ. ಆದರೆ ಎಲ್ಲರೂ ತಾವು ಗಳಿಸಿರುವ ಪದವಿಗಳಿಗೆ ಮತ್ತು ತಮ್ಮ ಕೌಶಲ್ಯಗಳಿಗೆ ತಕ್ಕ ಒಳ್ಳೆಯ ಸಂಬಳ ನೀಡುವ ಕಂಪೆನಿಗಳಲ್ಲಿ ಕೆಲಸ ಹುಡುಕುವುದರಲ್ಲಿಯೇ ವರ್ಷಗಳು ಕಳೆದುಹೋಗುತ್ತಿವೆ. ಕೇರಳವು ನಮ್ಮ ದೇಶದಲ್ಲಿ ಅತೀ ಹೆಚ್ಚು ಸಾಕ್ಷರತಾ ರಾಜ್ಯವಾಗಿದ್ದು, ಅಲ್ಲಿಂದಲೂ ಉದ್ಯೋಗಕ್ಕಾಗಿ ಜನರು ವಲಸೆ ಹೋಗುತ್ತಿದ್ದಾರೆ ಎಂದರೆ ವಿಪರ್ಯಾಸಕರವಲ್ಲವೇ?

ಸರ್ಟಿಫಿಕೇಟ್‌ಯುಕ್ತ ಶಿಕ್ಷಣವಿದ್ದರೂ ಕೆಲಸ ಇಲ್ಲ

ಐಐಟಿ, ಪಾಲಿಟೆಕ್ನಿಕ್‌ಗಳಿಂದ ಹಿಡಿದು ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಪಡೆದವರು ಒಳ್ಳೆಯ ಕೆಲಸ ಹುಡುಕುತ್ತಿರುವುದು ಅಥವಾ ಕೆಲಸಕ್ಕೆ ಲಭ್ಯವಿರುವವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತಿದ್ದಾರೆ. ಪ್ರಸ್ತುತ ಕೊರೋನ ನಡುವೆ ಚೀನಾ ಮತ್ತು ಭಾರತದ ನಡುವೆ ವಾಗ್ಧಾಳಿ ನಡೆದಾಗ ಭಾರತ ಸುಮಾರು 100ರಷ್ಟು ಆ್ಯಪ್‌ಗಳನ್ನು ನಮ್ಮ ದೇಶೀಯ ವೆಬ್‌ಸೈಟ್‌ಗಳಿಂದ ಹೊರತೆಗೆಯಿತು. ಈ ಎಲ್ಲಾ ಆ್ಯಪ್‌ಗಳ ಕಂಪೆನಿಗಳ ಮೂಲಕ ಕೆಲಸ ಮಾಡುತ್ತಿದ್ದ, ಉತ್ತಮ ಕಾರ್ಯಶೀಲತೆಯನ್ನು ಹೊಂದಿದ್ದ ದೇಶೀಯ ಅದೆಷ್ಟೋ ಉದ್ಯೋಗಸ್ಥರು ಈಗ ನಿರುದ್ಯೋಗಿಗಳಾಗಿದ್ದಾರೆ.

ಕೌಶಲ್ಯ, ಸಂಕಲ್ಪಾಧರಿತ ಶಿಕ್ಷಣವೇ ಪರಿಹಾರ

ಗುಡಿ ಕೈಗಾರಿಕೆ, ಕೃಷಿ ಮುಂತಾದ ಉದ್ಯೋಗಗಳು ಪ್ರಧಾನವಾಗಿ ಹಳ್ಳಿ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ ಮತ್ತು ದೇಶದಲ್ಲಿ ಉದ್ಯೋಗ ಕಲ್ಪಿಸುವ ಕ್ಷೇತ್ರದಲ್ಲಿ ಶೇ. 50ರಷ್ಟು ಕೃಷಿ ಹಾಗೂ ಶೇ. 40ರಷ್ಟು ಸಣ್ಣ ಉದ್ಯಮ ವಲಯಗಳು ಮುಂಚೂಣಿಯಲ್ಲಿವೆ. ಶಿಕ್ಷಣವಂತರನ್ನು ಗುಡಿ ಕೈಗಾರಿಕೆ ಮತ್ತು ಕೃಷಿಯಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬೇಕು. ಆದಷ್ಟು ಮಟ್ಟಿಗೆ ಕೃಷಿಯಲ್ಲಿ ತಂತ್ರಜ್ಞಾನ ಕಡಿಮೆಗೊಳಿಸಬೇಕು. ಆಗ ಕೃಷಿಯಲ್ಲಿ ಉದ್ಯೋಗಗಳು ಹೆಚ್ಚುತ್ತವೆ. ವಿದ್ಯಾವಂತರು ಎನ್ನಿಸಿಕೊಂಡ ಯುವ ಜನಾಂಗವು ಹೆಚ್ಚು ಸಂಬಳ ಸಿಗುವ ಕೆಲಸಗಳಿಗಾಗಿ ವಲಸೆ ಹೊರಡುವ ಬದಲು ತಾವು ಸ್ವಾಭಿಮಾನಿಯಾಗಿ ಸ್ವ ಉದ್ಯೋಗ ಸೃಷ್ಟಿಕೊಳ್ಳಲು ಸರಕಾರ ಹಚ್ಚಿನ ಸವಲತ್ತುಗಳನ್ನು ನೀಡಬೇಕು.

ಮುಖ್ಯವಾಗಿ ವಿದೇಶಿ ಡಾಲರ್‌ಗಳು ಮತ್ತು ಭಾರತೀಯ ರೂಪಾಯಿಗಳ ವೌಲ್ಯದಲ್ಲಿ ನಿಯಂತ್ರಣ ಸಾಧಿಸಬೇಕು. ಆಗ ಮಾತ್ರ ವಿದೇಶಕ್ಕೆ ಹಾರುವ ಉದ್ಯಮದ ಯೋಚನೆ, ಯೋಜನೆಗಳು ನಿಂತು, ನಮ್ಮ ದೇಶದಲ್ಲೇ ಈ ಯೋಚನೆ, ಯೋಜನೆಗಳು ಆರಂಭವಾಗುತ್ತವೆ. ಆಗ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳ ಏರಿಕೆಯಾಗುತ್ತವೆ. ಆಯಾ ರಾಜ್ಯಗಳು ಮೊದಲು ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ಯೋಜನೆಗಳನ್ನು ಜಾರಿಗೆ ತರಬೇಕು. ಪ್ರಸ್ತುತ ನಮ್ಮ ದೇಶದಲ್ಲಿ ಅತ್ಯಾಚಾರ, ಬಡತನ, ಭ್ರಷ್ಟಾಚಾರ ಎದ್ದು ಕಾಣುವುದಕ್ಕೆ ಮೂಲವೇ ನಿರುದ್ಯೋಗವಾಗಿರುವುದರಿಂದ ದೇಶದ ಯುವಜನತೆ ಸ್ವಾಭಿಮಾನಿಗಳಾಗಿ ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಂತ ಉದ್ಯೋಗ ಕೈಗೊಂಡಾಗ ಮಾತ್ರ ನಿರುದ್ಯೋಗವೆಂಬ ಸಮಸ್ಯೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಬಹುದಾಗಿದೆ.

Writer - ಶಿವರಾಜ್ ಎಂ. ಕೆ.

contributor

Editor - ಶಿವರಾಜ್ ಎಂ. ಕೆ.

contributor

Similar News