ಪೆಗಾಸಸ್ : ಸುಪ್ರೀಂ ಕೋರ್ಟ್ ಮೊರೆ ಹೋದ ಬಾಧಿತ ಪತ್ರಕರ್ತರು

Update: 2021-08-03 08:19 GMT

ಹೊಸದಿಲ್ಲಿ : ಪೆಗಾಸಸ್ ಸ್ಪೈವೇರ್ ಬಳಸಿ ತಮ್ಮ ಫೋನ್‍ಗಳನ್ನು ಹ್ಯಾಕ್ ಮಾಡಲಾಗಿರುವುದು ಫೊರೆನ್ಸಿಕ್ ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ಹೇಳಿರುವ ನಾಲ್ಕು ಪತ್ರಕರ್ತರಾದ ಪರಂಜೋಯ್ ಗುಹಾ ಥಾಕುರ್ತ, ಎಸ್ ಎನ್ ಎಂ ಅಬ್ದಿ, ಪ್ರೇಮ್ ಶಂಕರ್ ಝಾ, ರೂಪೇಶ್ ಕುಮಾರ್ ಸಿಂಗ್ ಹಾಗೂ ಹೋರಾಟಗಾರ್ತಿ ಇಪ್ಸಾ ಶತಾಕ್ಷಿ  ಸೋಮವಾರ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾರೆ.

ರೂಪೇಶ್ ಕುಮಾರ್ ಹಾಗೂ ಇಪ್ಸಾ ಜಂಟಿಯಾಗಿ ಅರ್ಜಿ ಸಲ್ಲಿಸಿದ್ದರೆ ಉಳಿದವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಐದು ಮಂದಿಯ ಅರ್ಜಿಗಳಲ್ಲೂ ಬೇಡಿಕೆ ಒಂದೇ ಆಗಿದೆ. ತಮ್ಮ ಮೇಲೆ ಪೆಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆ ನಡೆಸಲು ನೀಡಲಾದ ಅನುಮತಿ, ಆದೇಶ ಹಾಗೂ ಸಂಬಂಧಿತ ತನಿಖೆಯ ಎಲ್ಲಾ ವಿವರಗಳನ್ನೂ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ಈ ಐದು ಮಂದಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಸರಕಾರಿ ಏಜನ್ಸಿಗಳು ತಮ್ಮ ಮೇಲೆ ನಡೆಸಿರುವ ಕಾನೂನುಬಾಹಿರ ಬೇಹುಗಾರಿಕೆಯು ಸಂವಿಧಾನದತ್ತ  ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

"ಭಾರತ ಸರಕಾರ ಅಥವಾ ತೃತೀಯ ಪಕ್ಷವೊಂದು ತಮ್ಮ ಮೇಲೆ ಬಹಳಷ್ಟು ಬೇಹುಗಾರಿಕೆ ನಡೆಸಿದೆ ಇದು ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆಯೂ ಆಗಿದೆ. ಇದರಿಂದಾಗಿ ಸರಕಾರದ ತಪ್ಪುಗಳನ್ನು ಸಾಮಾಜಿಕ ಹೋರಾಟಗಾರರು  ಎತ್ತಿ ತೋರಿಸಲು ಹಿಂಜರಿಯಬಹುದು ಎಂದು ಅವರು ಹೇಳಿದ್ದಾರಲ್ಲದೆ ಸರಕಾರ ಅಥವಾ ಅದರ ಯಾವುದಾದರೂ ಏಜನ್ಸಿ ಪೆಗಾಸಸ್ ಸ್ಪೈವೇರ್ ಬಳಸುವುದು ಅಕ್ರಮ ಎಂದು ಸುಪ್ರೀಂ ಕೋರ್ಟ್ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಪೆಗಾಸಸ್ ಸ್ಪೈವೇರ್‍ನಿಂದ ಬಾಧಿತರಾದವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಇದೇ ಮೊದಲ ಬಾರಿಯಾಗಿದೆ. ಇದಕ್ಕೂ ಮೊದಲು ಹಿರಿಯ ಪತ್ರಕರ್ತರಾದ ಎನ್ ರಾಮ್ ಹಾಗೂ ಶಶಿ ಕುಮಾರ್ ಅವರು ಪಿಐಎಲ್ ದಾಖಲಿಸಿ  ಪೆಗಾಸಸ್ ಸ್ಪೈವೇರ್ ದಾಳಿಗಳ ಕುರಿತು ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕೆಂದು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News