ವಿರಳ ಕಾಯಿಲೆಯಿಂದ ಬಳಲುತ್ತಿದ್ದ ಭಾರತದ ಮಗುವಿಗೆ ಅಮೆರಿಕಾದಿಂದ ಉಚಿತ 16 ಕೋಟಿ ರೂ.ಯ ಔಷಧಿ

Update: 2021-08-03 16:54 GMT

ನಾಸಿಕ್(ಮಹಾರಾಷ್ಟ್ರ),ಆ.3: ಅಪರೂಪದ ಆನುವಂಶಿಕ ಕಾಯಿಲೆ ಸ್ಪೈನಲ್ ಮಸ್ಕುಲರ್ ಅಟ್ರಾಫಿ(ಎಸ್ಎಂಎ)ಯಿಂದ ನರಳುತ್ತಿರುವ ನಾಸಿಕ್ ನ ಮಗು ಶಿವರಾಜ್ ದಾವರೆಯ ಎರಡನೇ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆಯೊಂದು ಅಮೆರಿಕದಿಂದ ಬಂದಿದೆ. ಲಕಿ ಡ್ರಾನಲ್ಲಿ ವಿಜೇತನಾಗಿರುವ ಶಿವರಾಜ್ ಅಮೆರಿಕದ ಕಂಪನಿಯಿಂದ 16 ಕೋ.ರೂ.ವೌಲ್ಯದ ಇಂಜೆಕ್ಷನ್ ಅನ್ನು ಉಚಿತವಾಗಿ ಪಡೆದ ಭಾರತದ ಮೊದಲ ಇಂತಹ ರೋಗಿಯಾಗಿದ್ದಾನೆ ಎಂದು ಹೆತ್ತವರು ತಿಳಿಸಿದ್ದಾರೆ.

ಅಮೆರಿಕ ಸಂಸ್ಥೆಯು ತಯಾರಿಸುತ್ತಿರುವ ರೊಲ್ಗೆನ್ಸ್ಮಾ ಇಂಜೆಕ್ಷನ್ ವಂಶವಾಹಿಯನ್ನು ಬದಲಿಸುವ ಚಿಕಿತ್ಸೆಯಾಗಿದ್ದು,ಇಂತಹ ರೋಗಿಗಳಲ್ಲಿ ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಶಿವರಾಜ್ ನ ತಂದೆ ವಿಶಾಲ್ ದಾವರೆ ಮತ್ತು ತಾಯಿ ಕಿರಣ್ ಮಧ್ಯಮವರ್ಗಕ್ಕೆ ಸೇರಿದವರಾಗಿದ್ದು,ಮಗನ ಅಪರೂಪದ ಕಾಯಿಲೆ ಮತ್ತು ಇಂಜೆಕ್ಷನ್ನ ಬೃಹತ್ ವೆಚ್ಚ ಅವರನ್ನು ಕಂಗೆಡಿಸಿತ್ತಾದರೂ ಭರವಸೆಯನ್ನು ಕಳೆದುಕೊಂಡಿರಲಿಲ್ಲ.

ಕಾಯಿಲೆಯನ್ನು ದೃಢಪಡಿಸಿದ್ದ ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಮಗುವನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ಕರೆದೊಯ್ದಿದ್ದ ಹೆತ್ತವರಿಗೆ ಅಲ್ಲಿಯ ನರರೋಗಶಾಸ್ತ್ರಜ್ಞ ಡಾ.ಬೃಜೇಶ ಉದಾನಿ ಅವರು,ಶಿವರಾಜ್ ಜೀವವನ್ನುಳಿಸಲು ರೊಲ್ಗೆನ್ಸ್ಮಾ ಇಂಜೆಕ್ಷನ್ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ್ದರು. ನಾಸಿಕ್ನಲ್ಲಿ ಝೆರಾಕ್ಸ್ ಅಂಗಡಿಯೊಂದನ್ನು ನಡೆಸುತ್ತಿರುವ ವಿಶಾಲ್ ದಾವರೆಗೆ ಈ ಇಂಜೆಕ್ಷನ್ಗೆ ತಗಲುವ ಬೃಹತ್ ಮೊತ್ತವನ್ನು ವ್ಯವಸ್ಥೆ ಮಾಡುವುದು ಅಸಾಧ್ಯವಾಗಿತ್ತು.

ಅಮೆರಿಕದ ಕಂಪನಿಯು ಇಂಜೆಕ್ಷನ್ ನ ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸಲು ಲಾಟರಿಯೊಂದನ್ನು ನಡೆಸುತ್ತಿದ್ದು,ಅದೃಷ್ಟವಿದ್ದರೆ ಮಗುವಿಗೆ ಉಚಿತವಾಗಿ ಔಷಧಿಯು ಲಭ್ಯವಾಗಬಹುದು. ಹೀಗಾಗಿ ಕಂಪನಿಗೆ ಅರ್ಜಿಯನ್ನು ಸಲ್ಲಿಸುವಂತೆ ಡಾ.ಉದಾನಿ ಸೂಚಿಸಿದ್ದರು.

2020,ಡಿ.25ರಂದು ಕಂಪನಿಯು ಉಚಿತ ಇಂಜೆಕ್ಷನ್ ನೀಡಿಕೆಗಾಗಿ ಲಕ್ಕಿ ಡ್ರಾದಲ್ಲಿ ಶಿವರಾಜ್ ನನ್ನು ಆಯ್ಕೆ ಮಾಡಿತ್ತು. 2021,ಜ.19ರಂದು ಹಿಂದುಜಾ ಆಸ್ಪತ್ರೆಯಲ್ಲಿ ಮಗುವಿಗೆ ಈ ಇಂಜೆಕ್ಷನ್ ನೀಡಲಾಗಿದೆ.

ಎಸ್ಎಂಎ ಆನುವಂಶಿಕ ಕಾಯಿಲೆಯಾಗಿದ್ದು,ಪ್ರತಿ 10,000 ಮಕ್ಕಳಲ್ಲಿ ಒಂದು ಮಗುವನ್ನು ಕಾಡುತ್ತದೆ. ಅದು ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಸ್ನಾಯುಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತವೆ, ಬಳಿಕ ಮಗುವಿನ ಸಾವಿಗೆ ಕಾರಣವಾಗುತ್ತದೆ ಎಂದು ಶಿವರಾಜ್ ಗೆ ಈ ಹಿಂದೆ ಚಿಕಿತ್ಸೆ ನೀಡಿದ್ದ ಡಾ.ರಮಂತ ಪಾಟೀಲ್ ತಿಳಿಸಿದರು.
ಆದರೆ ಪುಣೆಯ ಒಂದರ ಹರೆಯದ ವೇದಿಕಾ ಶಿಂದೆ ಹೆಚ್ಚು ಅದೃಷ್ಟ ಪಡೆದುಕೊಂಡು ಬಂದಿರಲಿಲ್ಲ. ಎಸ್ಎಂಎ ಟೈಪ್ 1ರಿಂದ ಬಳಲುತ್ತಿದ್ದ ಈ ಮಗು ಇದೇ ಇಂಜೆಕ್ಷನ್ ಪಡೆದ ಸುಮಾರು ಎರಡು ತಿಂಗಳ ಬಳಿಕ ರವಿವಾರ ಸಂಜೆ ಅಸು ನೀಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News