ಒಲಿಂಪಿಕ್ಸ್: ಸತತ 2ನೇ ಬಾರಿ 100, 200 ಮೀ. ಓಟದಲ್ಲಿ ಚಿನ್ನಕ್ಕೆ ಮುತ್ತಿಟ್ಟ ಜಮೈಕಾದ ಥಾಂಪ್ಸನ್-ಹೆರಾ

Update: 2021-08-03 15:41 GMT
Photo via @Olympics on Twitter

ಟೋಕಿಯೊ: ಜಮೈಕಾದ ಎಲೈನ್ ಥಾಂಪ್ಸನ್ -ಹೆರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಂಗಳವಾರ ಇತಿಹಾಸ ನಿರ್ಮಿಸಿದರು. 200 ಮೀಟರ್ ಓಟದಲ್ಲಿ ಜಯ ಸಾಧಿಸಿದ ಅವರು ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಅಭೂತಪೂರ್ವ ‘ಡಬಲ್-ಡಬಲ್’ ಸಾಧನೆ ಮಾಡಿ ಮಿಂಚಿದರು.

2016 ರ ರಿಯೋ ಒಲಿಂಪಿಕ್ಸ್ ನಲ್ಲಿ 100 ಮೀ. ಹಾಗೂ 200 ಮೀ. ಓಟದಲ್ಲಿ  ಚಿನ್ನದ ಪದಕ ವಿಜೇತೆ ಥಾಂಪ್ಸನ್-ಹೆರಾ  ಶನಿವಾರ ನಡೆದ ಮಹಿಳೆಯರ 100 ಮೀಟರ್ ಓಟದಲ್ಲಿ 10.61 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ನಲ್ಲಿ ದಾಖಲೆ ನಿರ್ಮಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು. ಮಂಗಳವಾರ 200 ಮೀ. ಓಟದಲ್ಲಿ  21.53 ಸೆಕೆಂಡುಗಳಲ್ಲಿ ಗುರಿ ತಲುಪಿದ  ಥಾಂಪ್ಸನ್ -ಹೆರಾ  ಒಲಿಂಪಿಕ್ಸ್ ನಲ್ಲಿ ದಾಖಲೆಯ ನಾಲ್ಕನೇ ವೈಯಕ್ತಿಕ ಚಿನ್ನವನ್ನು ತನ್ನದಾಗಿಸಿಕೊಂಡರು.

200 ಮೀ. ಓಟದಲ್ಲಿ ನಮೀಬಿಯಾದ ಕ್ರಿಸ್ಟೀನ್ ಎಂಬೋಮಾ 21.81 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದರೆ, ಅಮೆರಿಕದ ಗ್ಯಾಬಿ ಥಾಮಸ್ 21.87 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚು ಪಡೆದರು.

100 ಮೀ. ಹಾಗೂ 200 ಮೀ. ಓಟದಲ್ಲಿ  ‘ಡಬಲ್-ಡಬಲ್’ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ  ಥಾಂಪ್ಸನ್-ಹೆರಾ ನಾಲ್ಕು ವೈಯಕ್ತಿಕ ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದ ಏಕೈಕ ಮಹಿಳಾ ಟ್ರ್ಯಾಕ್ ಹಾಗೂ ಫೀಲ್ಡ್ ಅಥ್ಲೀಟ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News