ಪೆಗಾಸಸ್ ಹಗರಣದಲ್ಲಿ ತನಿಖೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಎಡಿಟರ್ಸ್ ಗಿಲ್ಡ್

Update: 2021-08-03 15:17 GMT

ಹೊಸದಿಲ್ಲಿ,ಆ.3: ಪೆಗಾಸಸ್ ಸ್ಪೈವೇರ್ ಹಗರಣದಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ಕೋರಿ ಎಡಿಟರ್ಸ್ ಗಿಲ್ಡ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ನ್ಯಾಯಾಧೀಶರು ಸರಕಾರದಿಂದ ಪೆಗಾಸಸ್ ಗುತ್ತಿಗೆಯ ಬಗ್ಗೆ ವಿವರಗಳನ್ನು ಮತ್ತು ಬೇಹುಗಾರಿಕೆಗೆ ಗುರಿಯಾಗಿಟ್ಟುಕೊಂಡವರ ಪಟ್ಟಿಯನ್ನು ಕೇಳುವಂತೆಯೂ ಅದು ಅರ್ಜಿಯಲ್ಲಿ ಕೋರಿಕೊಂಡಿದ್ದು, ಸರ್ವೋಚ್ಛ ನ್ಯಾಯಾಲಯವು ಗುರುವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಪೆಗಾಸಸ್ ಬೇಹುಗಾರಿಕೆ ಕುರಿತು ಈಗಾಗಲೇ ಹಲವಾರು ಅರ್ಜಿಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು, ಹಲವಾರು ಪ್ರತಿಪಕ್ಷ ನಾಯಕರು,ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಈ ಅರ್ಜಿಗಳಲ್ಲಿ ಆರೋಪಿಸಿಲಾಗಿದೆ. ತಾನು ಅಳೆದು ತೂಗಿರುವ ಸರಕಾರಗಳು ಮತ್ತು ಸರಕಾರಿ ಸಂಸ್ಥೆಗಳು ಮಾತ್ರ ತನ್ನ ಗ್ರಾಹಕರಾಗಿವೆ ಎಂದು ಪೆಗಾಸಸ್ ಸಾಫ್ಟ್ವೇರ್ ಅನ್ನು ಮಾರಾಟ ಮಾಡುವ ಇಸ್ರೇಲಿನ ಎನ್ಎಸ್ಒ ಗ್ರೂಪ್ ಸ್ಪಷ್ಟನೆಯನ್ನು ನೀಡಿದ ಬಳಿಕ ಸರಕಾರವು ಒತ್ತಡದಲ್ಲಿ ಸಿಲುಕಿದೆ.

ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿಕುಮಾರ್,ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಮತ್ತು ನ್ಯಾಯವಾದಿ ಎಂ.ಎಲ್.ಶರ್ಮಾ ಅರ್ಜಿ ಸಲ್ಲಿಸಿದವರಲ್ಲಿ ಸೇರಿದ್ದಾರೆ. ಪೆಗಾಸಸ್ನ ಬೇಹುಗಾರಿಕೆ ಪಟ್ಟಿಯಲ್ಲಿದ್ದರು ಎನ್ನಲಾಗಿರುವ ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕೂರ್ ಮತ್ತು ಇತರ ನಾಲ್ವರೂ ಈ ಸ್ಪೈವೇರ್ ನ ಸ್ಥಾಪನೆ ಅಥವಾ ಬಳಕೆಯನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News