ಹೈದರಾಬಾದ್ ಎನ್ಕೌಂಟರ್ ಪ್ರಕರಣ: ತನಿಖಾ ಆಯೋಗದ ಅವಧಿ 6 ತಿಂಗಳು ವಿಸ್ತರಿಸಿದ ಸುಪ್ರೀಂ

Update: 2021-08-03 16:00 GMT

ಹೊಸದಿಲ್ಲಿ, ಆ.3: ಹೈದರಾಬಾದ್ ನಲ್ಲಿ 2019ರಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ನಡೆಸಿ ಹತ್ಯೆಗೈದ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಆಯೋಗದ ಅವಧಿಯನ್ನು ಇನ್ನೂ ಆರು ತಿಂಗಳ ಕಾಲ ಸುಪ್ರೀಂಕೋರ್ಟ್ ವಿಸ್ತರಿಸಿದೆ.

ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸಲು ಸುಪ್ರೀಂಕೋರ್ಟ್ ಕಾಲಾವಕಾಶ ವಿಸ್ತರಿಸಿರುವುದು ಇದು ಮೂರನೆ ಸಲವಾಗಿದೆ. ಈ ಹಿಂದೆ 2020 ಹಾಗೂ 2021ರಲ್ಲಿ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು.

ಮಂಗಳವಾರ ನಡೆದ ಆಲಿಕೆಯ ಸಂದರ್ಭದಲ್ಲಿ ತನಿಖಾ ಆಯೋಗದ ಪರವಾಗಿ ವಾದಿಸಿದ ನ್ಯಾಯವಾದಿ ಕೆ. ಪರಮೇಶ್ವರ್ ಅವರು ಆಯೋಗಕ್ಕೆ ಎಂಟು ತಿಂಗಳ ಕಾಲಾವಕಾಶ ಕೋರಿದರು. ಆಯೋಗವು 130 ಮಂದಿ ಸಾಕ್ಷಿಗಳ ಪಟ್ಟಿಯನ್ನು ತಯಾರಿಸಿರುವುದಾಗಿ ಅವರು ಹೇಳಿದರು.
 
ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠವು, ಈ ಕೆಲಸವನ್ನು ಮೂರ್ನಾಲ್ಕು ತಿಂಗಳೊಳಗೆ ನಡೆಸಬಹುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿ 130-140 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬೇಕಾದ ಅಗತ್ಯವಿದೆಯೇ ಎಂದು ಪ್ರಶ್ನಿಸಿತು.

2019ರ ನವೆಂಬರ್ 27ರಂದು ಹೈದರಾಬಾದ್ನಲ್ಲಿ ಪಶುವೈದ್ಯೆಯೊಬ್ಬರನ್ನು ನಾಲ್ವರು ದುಷ್ಕರ್ಮಿಗಳ ಗುಂಪೊಂದು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದಿತ್ತು. ಘಟನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಜೊಲ್ಲು ಶಿವ, ಜೊಲ್ಲು ನವೀನ್, ಮುಹಮ್ಮದ್ ಅರೀಫ್ ಹಾಗೂ ಚಿಂತಾಕುಂಟ ಚೆನ್ನಕೇಶವಲು ಎಂಬವರನ್ನು ನವೆಂಬರ್ 29ರಂದು ಬಂಧಿಸಲಾಗಿತ್ತು.
  
ಡಿಸೆಂಬರ್ 6ರಂದು ನಾಲ್ವರು ಆರೋಪಿಗಳನ್ನು ಹೈದರಾಬಾದ್ನ ಎನ್ಎಚ್44 ಸಮೀಪದಲ್ಲಿರುವ ಘಟನೆ ನಡೆದ ಸ್ಥಳದ ಪರಿಶೀಲನೆಗೆ ಕೊಂಡೊಯ್ದ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದರು. ಆರೋಪಿಗಳು ತಮ್ಮಿಂದ ಶಸ್ತ್ರಾಸ್ತ್ರಗಳನ್ನ ಕಸಿದು, ಪೊಲೀಸರ ಮೇಲೆ ಗುಂಡು ಹಾರಿಸಿದ್ದರಿಂದ ತಾವು ಅವರನ್ನು ಎನ್ಕೌಂಟರ್ನಲ್ಲಿ ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News