ಲೋಕಸಭೆಯಲ್ಲಿ ನಿಲ್ಲದ ಪೆಗಾಸಸ್ ಗದ್ದಲ: ಪ್ರತಿಭಟನೆ ಮುಂದುವರಿಸಿದ ವಿಪಕ್ಷ ಸದಸ್ಯರು‌

Update: 2021-08-03 16:47 GMT

ಹೊಸದಿಲ್ಲಿ, ಆ.3: ಪೆಗಾಸಸ್ ಹಗರಣ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಸದನದಲ್ಲಿ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ಮಂಗಳವಾರವೂ ಮುಂದುವರಿದಿದ್ದು, ಸದನವು ಗದ್ದಲದ ಗೂಡಾಯಿತು. ‌

ಈ ನಡುವೆ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ, ಕೋಲಾಹಲಗಳ ನಡುವೆಯೇ ಲೋಕಸಭೆಯಲ್ಲಿ ಮಂಗಳವಾರ ಅವಶ್ಯಕ ರಕ್ಷಣಾ ಸೇವೆಗಳ ವಿಧೇಯಕ-2021ನ್ನು ಅಂಗೀಕರಿಸಲಾಯಿತು.

ಬೆಳಗ್ಗೆ 11:00 ಗಂಟೆಯ ವೇಳೆಗೆ ಸದನವು ಸಮಾವೇಶಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಸ್ಪೀಕರ್ ಪೀಠದ ಎದುರಿನ ಅಂಗಣಕ್ಕೆ ಧಾವಿಸಿ ಪೆಗಾಸಸ್ ಬೇಹುಗಾರಿಕೆ ಹಗರಣದ ತನಿಖೆಗೆ ಆಗ್ರಹಿಸಿದರು ಹಾಗೂ ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಗೆ ಪಟ್ಟು ಹಿಡಿದರು.
 
ಪ್ರಶ್ನೋತ್ತರ ವೇಳೆಯಲ್ಲಿ ಕೃಷಿ ಹಾಗೂ ರೈತರ ಕಲ್ಯಾಣ ಯೋಜನೆಗಳ ಕುರಿತು ಚರ್ಚೆಯಾದಾಗ ಸ್ಪೀಕರ್ ಓಂ ಬಿಲಾರ್  ಅವರು ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸದಸ್ಯರು ಚರ್ಚಿಸಬಹುದೆಂದು ತಿಳಿಸಿದರು.

ಆದಾಗ್ಯೂ ಅದನ್ನು ತಿರಸ್ಕರಿಸಿದ ಕಾಂಗ್ರೆಸ್, ಎಸ್ಪಿ ಮತ್ತಿತರ ಪಕ್ಷಗಳ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಗದ್ದಲದ ಮಧ್ಯೆಯೇ 40 ನಿಮಿಷಗಳ ಕಾಲ ಪ್ರಶ್ನೋತ್ತರ ಕಲಾಪವನ್ನು ನಡೆಸಿದ ಬಳಿಕ ಬಿರ್ಲಾ ಆವರು ಸದನವನ್ನು ಮಧ್ಯಾಹ್ನ 12:00ರವರೆಗೆ ಮುಂದೂಡಿದರು. ಮಧ್ಯಾಹ್ನದ ವೇಳೆಗೆ ಸದನವು ಮರುಕಲೆತಾಗ ಪ್ರತಿಪಕ್ಷ ಸಂಸದರು ಮತ್ತೆ ಪ್ರತಿಭಟನೆ ಮುಂದುವರಿಸಿದರು.

ಮಧ್ಯಾಹ್ನ 2:00 ಗಂಟೆಯ ವೇಳೆಗೆ ಸದನವು ಮರುಸಮಾವೇಶಗೊಳ್ಳುತ್ತಿದ್ದಂತೆಯೇ, ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನಾ ನಿರತ ಸಂಸದರನ್ನು ತಮ್ಮ ಆಸನಗಳಿಗೆ ಮರಳುವಂತೆ ಸೂಚಿಸಿದರು ಹಾಗೂ ಅವರಿಗೆ ಮಾತನಾಡಲು ಅವಕಾಶ ನೀಡುವುದಾಗಿ ತಿಳಿಸಿದರು. ಆದಾಗ್ಯೂ ಪ್ರತಿಪಕ್ಷ ಸದಸ್ಯರು ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ಹಾಗೂ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.
ಸದನದಲ್ಲಿ ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೂ 2021ರ ಸಾಲಿನ ಅಗತ್ಯ ರಕ್ಷಣಾ ಸೇವೆಗಳ ವಿಧೇಯಕವನ್ನು ಅಂಗೀಕರಿಸಲಾಯಿತು. ಆನಂತ ಕಲಾಪವನ್ನು ಸಂಜೆ 4:00 ಗಂಟೆಯ ವೇಳೆಗೆ ಮುಂದೂಡಲಾಯಿತು.

ಸ್ಪೀಕರ್ ಆಸನದಲ್ಲಿದ್ದ ಹಿರಿಯ ಸಂಸದ ಭಾತೃಹರಿ ಮಹ್ತಾಬ್ ಅವರು ವಿವಿಧ ಸಚಿವಾಲಯಗಳಿಗೆ ಸಂಬಂಧಿಸಿದ ಕಡತನಗಳನ್ನು ಸದನದ ಮುಂದಿಡಲು ಅನುಮತಿಯಿತ್ತರು.

ಆಸನಗಳಿಗೆ ಮರಳುವಂತೆ ಮಹತಾಬ್ ಮಾಡಿದ ಮನವಿಗೆ ವಿಪಕ್ಷ ಸದಸ್ಯರು ಕಿವಿಗೊಡದೇ ಇದ್ದಾಗ 10 ನಿಮಿಷಗಳ ಕಲಾಪದ ಬಳಿಕ ಸದನವನ್ನು ಮಧ್ಯಾಹ್ನ 2:00 ಗಂಟೆಯವರೆಗೆ ಮುಂದೂಡಲಾಯಿತು. ಪೆಗಾಸಸ್ ಬೇಹುಗಾರಿಕೆ ಹಗರಣ ಹಾಗೂ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಪಕ್ಷ ಸದಸ್ಯರು  ಜುಲೈ 19ರಂದು ಮುಂಗಾರು ಅಧಿವೇಶನದ ಆರಂಭದಿಂದಲೂ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಬಹುತೇಕ ಕಲಾಪದ ಬಹುತೇಕ ಅವಧಿಯು ವ್ಯರ್ಥವಾಗಿ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News