ಮಹಾಪಂಚಾಯತ್ ನಲ್ಲಿ ಕೋಮುಪ್ರಚೋದನಕಾರಿ ಭಾಷಣ: 'ಜಾಮಿಯಾ ಶೂಟೌಟ್' ಆರೋಪಿಗೆ ಜಾಮೀನು

Update: 2021-08-03 17:03 GMT

ಹೊಸದಿಲ್ಲಿ, ಆ.3: ಹರ್ಯಾಣದ ಪಟೌಡಿ ನಗರದಲ್ಲಿ ಕಳೆದ ತಿಂಗಳು ನಡೆದ ಮಹಾಪಂಚಾಯತ್ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಿಗೆ ಮಂಗಳವಾರ ಸ್ಥಳೀಯ ನ್ಯಾಯಾಲಯ ಜಾಮೀನು ಬಿಡುಗಡೆಗೊಳಿಸಿದೆ.

ಇದೇ ಆರೋಪಿಯು ಕಳೆದ ವರ್ಷ ದಿಲ್ಲಿಯ ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿದ ಆರೋಪವನ್ನು ಕೂಡಾ ಎದುರಿಸುತ್ತಿದ್ದಾನೆ. ಈ ಘಟನೆಗೆ ನಡೆದಾಗ ಆತನಿಗೆ 17 ವರ್ಷವಾಗಿದ್ದರಿಂದ ಅಪ್ರಾಪ್ತ ವಯಸ್ಕನೆಂಬ ಕಾರಣಕ್ಕಾಗಿ ಆತನ ಗುರುತನ್ನು ಬಹಿರಂಗಪಡಿಸಲಾಗಿಲ್ಲ.
 
ದ್ವೇಷ ಭಾಷಣದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ಜುಲೈನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ಅದನ್ನು ತಿರಸ್ಕರಿಸಿದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಗೀರ್ ಮುಹಮ್ಮದ್ ಅವರು ‘‘ಇಂತಹ ದ್ವೇಷ ಹರಡುವ ವ್ಯಕ್ತಿಗಳನ್ನು ನಿರ್ಭಿತವಾಗಿ ಓಡಾಡಲು ಬಿಡಬಾರದು’’ ಎಂದು ಹೇಳಿದ್ದರು.

‘‘ಕಾನೂನಿನ ಪ್ರಭುತ್ವವಿದ್ದರೂ ಧರ್ಮಾಧಾರಿತ ದ್ವೇಷವನ್ನು ಹರಡುವ ಇಂತಹ ಸಮಾಜವಿರೋಧಿ ಶಕ್ತಿಗಳಿಗೆ ಬಲವಾದ ಸಂದೇಶ ನೀಡಲು ಇದು ಸಕಾಲವಾಗಿದೆ’’ ಎಂದು ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಾ ತಿಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿದ ಆರೋಪಿಯು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ಮೆಟ್ಟಲೇರಿದ್ದು, ಆತನಿಗೆ ಜಾಮೀನು ದೊರೆತಿದೆ.

ಜನಸಂಖ್ಯಾ ನಿಯಂತ್ರಣ ಹಾಗೂ ಸಂಘಪರಿವಾರದ ಕಪೋಲಕಲ್ಪಿತ ‘ಲವ್ ಜಿಹಾದ್’ ಬಗ್ಗೆ ಚರ್ಚಿಸಲು ಆಯೋಜಿಸಲಾಗಿದ್ದ ಮಹಾಪಂಚಾಯತ್ನಲ್ಲಿ ಆರೋಪಿಯು ಕೋಮುಪ್ರಚೋದಕ ಭಾಷಣ ಮಾಡಿದ್ದನೆಂದು ಆರೋಪಿಸಲಾಗಿತ್ತು.

ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 153ಎ (ಧರ್ಮಗಳ ನಡುವೆ ಶತ್ರುತ್ವ ಪ್ರಚೋದನೆ) ಹಾಗೂ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News