ಪೌರತ್ವ ತಿದ್ದುಪಡಿ ಕಾಯಿದೆ: ನಿಯಮಗಳ ಅಧಿಸೂಚನೆ ಹೊರಬಿದ್ದ ನಂತರವಷ್ಟೇ ಅರ್ಹರಿಗೆ ಪೌರತ್ವ; ಕೇಂದ್ರ

Update: 2021-08-04 11:57 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆಯಡಿಯ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಅರ್ಹ ಫಲಾನುಭವಿಗಳಿಗೆ ಭಾರತೀಯ ಪೌರತ್ವ ದೊರೆಯಲಿದೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಬುಧವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ  ತಿಳಿಸಿದ್ದಾರೆ.

ಈ ಕಾಯಿದೆಗೆ ಇನ್ನಷ್ಟು ತಿದ್ದುಪಡಿ ತರುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರಕಾರ ಈ ಕಾಯಿದೆಯನ್ನು ಜನವರಿ 10, 2020ರಂದು ಜಾರಿಗೊಳಿಸಿತ್ತು. ಸರಕಾರ ತಿಳಿಸಿದಂತೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಅಲ್ಪಸಂಖ್ಯಾತರಾದ ಹಿಂದುಗಳು, ಸಿಖರು, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಈ ಕಾಯಿದೆಯಡಿಯಲ್ಲಿ ಭಾರತೀಯ ಪೌರತ್ವ ನೀಡಲಾಗುವುದು.

ಈ ಕಾಯಿದೆಯ ನಿಯಮಗಳನ್ನು ಜಾರಿಗೊಳಿಸಲು ಸರಕಾರಕ್ಕೆ ಐದನೇ ಬಾರಿ ಹೆಚ್ಚಿನ ಸಮಾಯವಕಾಶ ಈಗಾಗಲೇ ದೊರಕಿದೆ. ಹಾಲಿ ನಿಯಮಗಳಂತೆ ಯಾವುದೇ  ಕಾಯಿದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ಆರು ತಿಂಗಳಲ್ಲಿಯೇ ಅಧಿನಿಯಮಗಳನ್ನು ಸೂಚಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News