ಎಲ್ಗಾರ್ ಪರಿಷದ್ ಆರೋಪಿಗಳನ್ನು ತಲೋಜ ಜೈಲಿನಿಂದ ಸ್ಥಳಾಂತರ ವಿರೋಧಿಸಿ ಕುಟುಂಬಗಳಿಂದ ಬಾಂಬೆ ಹೈಕೋರ್ಟಿಗೆ ಮೊರೆ

Update: 2021-08-04 13:29 GMT
Photo: thewire

ಹೊಸದಿಲ್ಲಿ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿರುವ ಆನಂದ್ ತೇಲ್ತುಂಬ್ಡೆ, ಸುರೇಂದ್ರ ಗದ್ಲಿಂಗ್ ಹಾಗೂ ಸುಧೀರ್ ಧವಳೆ ಅವರನ್ನು ತಲೋಜ ಕಾರಾಗೃಹದಿಂದ  ಮಹಾರಾಷ್ಟ್ರದ ಬೇರೊಂದು ಜೈಲಿಗೆ ಸ್ಥಳಾಂತರಿಸಿದ ಕ್ರಮವನ್ನು ವಿರೋಧಿಸಿ ಅವರ  ಕುಟುಂಬ ಸದಸ್ಯರು  ಬಾಂಬೆ ಹೈಕೋರ್ಟಿನ ಕದ ತಟ್ಟಿದ್ದಾರೆ.

ಗದ್ಲಿಂಗ್ ಹಾಗೂ ಧವಳೆ ಅವರನ್ನು 2018ರಲ್ಲಿ ಬಂಧಿಸಲಾಗಿತ್ತಾದರೆ ತೇಲ್ತುಂಬ್ಡೆ ಅವರನ್ನು 2020ರಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣದ ಪುರುಷ ಆರೋಪಿಗಳನ್ನು ಇತರ ಕಾರಾಗೃಹಗಳಿಗೆ ಸ್ಥಳಾಂತರಿಸಲು ಜೈಲಿನ ಅಧಿಕಾರಿಗಳು  ಇತ್ತೀಚೆಗೆ ಎನ್‍ಐಎ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ತಮ್ಮ ಅಭಿಪ್ರಾಯ ಕೇಳದೆ ಈ ನಿರ್ಧಾರವನ್ನು ಎನ್‍ಐಎ ನ್ಯಾಯಾಲಯ ಕೈಗೊಂಡಿದೆ ಎಂದು ಆರೋಪಿಗಳು ಹೇಳಿದ್ದಾರೆ. ಅವರನ್ನು ಬೇರೆ ಬೇರೆ ಕಾರಾಗೃಹಗಳಿಗೆ ಕಳುಹಿಸಿ ಪ್ರತ್ಯೇಕಿಸುವುದು ಎನ್‍ಐಎ ಉದ್ದೇಶವೆಂದು ಆರೋಪಿಗಳ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಅಧಿಕವಾಗಿರುವುದರಿಂದ 13 ಮಂದಿಯ ಪೈಕಿ ಆರು ಮಂದಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ಹಾಗೂ ಕೆಲ ಸೂಕ್ಷ್ಮ ಪ್ರಕರಣದ ಕೈದಿಗಳೂ ಜೈಲಿನಲ್ಲಿದ್ದಾರೆಂದು ತಲೋಜ ಕಾರಾಗೃಹದ ಮಾಜಿ ಅಧಿಕ್ಷಕರು ಮನವಿ ಮಾಡಿದ್ದರೆಂದು ಎನ್‍ಐಎ ತನ್ನ ಮನವಿಯಲ್ಲಿ ಹೇಳಿತ್ತು. ನಂತರ ಹಲವಾರು ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಲಾಯಿತಾದರೂ ಅವರ ಮನವಿಯನ್ನು ಪುರಸ್ಕರಿಸಿ  ನ್ಯಾಯಾಲಯ ಸ್ಥಳಾಂತರಕ್ಕೆ ಅನುಮತಿಸಿದೆ.

ಸದ್ಯ ಪ್ರಕರಣದಲ್ಲಿ ಬಂಧಿತ 13 ಮಂದಿ ಪುರುಷರ ಪೈಕಿ ವರವರ ರಾವ್ ಅವರು ವೈದ್ಯಕೀಯ ಕಾರಣಗಳಿಗಾಗಿ ಜಾಮೀನಿನ ಮೇಲಿದ್ದರೆ, ಹನಿ ಬಾಬು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಾ ಸ್ಟಾನ್ ಸ್ವಾಮಿ ಇತ್ತೀಚೆಗೆ ನಿಧನರಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News