ಪ್ರಧಾನಿಗೆ ದೂರು ನೀಡಿದರೂ ಬಗೆಹರಿಯದ ಸಮಸ್ಯೆ: ನೆಕ್ಕಿಲಾಡಿ ಗ್ರಾ.ಪಂ. ಕಡೆಗಣನೆಯಿಂದ ನದಿ ನೀರೇ ಗತಿ ಎಂದ ರಾಜನ್

Update: 2021-08-04 15:47 GMT

ಉಪ್ಪಿನಂಗಡಿ: ತನ್ನ ಮೂಲಭೂತ ಸೌಕರ್ಯವಾದ ಕುಡಿಯುವ ನೀರು ಪಡೆದುಕೊಳ್ಳಲು ವ್ಯಕ್ತಿಯೋರ್ವರು ಸುಮಾರು ಒಂದೂವರೆ ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಗ್ರಾ.ಪಂ., ತಾ.ಪಂ. ಜಿ.ಪಂ. ಎಸಿ, ಡಿಸಿ, ಗೃಹ ಸಚಿವರು ಕೊನೆಗೆ ಪ್ರಧಾನಿಯವರಿಗೂ ಪತ್ರ ಬರೆದಿದ್ದಾರೆ. ಆದರೆ ಇವರಿಗೆ ಕುಡಿಯುವ ನೀರಿನ ಸಂಪರ್ಕ ಮಾತ್ರ ಇನ್ನೂ ದೊರೆತಿಲ್ಲ. ಅಧಿಕಾರಿಗಳ ಬೇಜಾವಬ್ದಾರಿಯಿಂದ ಇವರಿಗೆ ಸ್ವಚ್ಛ ಕುಡಿಯುವ ನೀರೆನ್ನುವುದು ಮರೀಚಿಕೆಯಾಗಿದ್ದು, ನದಿಯ ನೀರನ್ನು ಬಳಸುವಂತಾಗಿದೆ ಎಂದು ದೂರಲಾಗಿದೆ.

62ರ ಹರೆಯದ ಕೆ.ರಾಜನ್ ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾ.ಪಂ.ನ ನಿವಾಸಿ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇವರ ಜಾಗವಿದ್ದು, ಅಲ್ಲೊಂದು ಬಾವಿಯೂ ಇತ್ತು. ಬಿ.ಸಿ.ರೋಡ್- ಅಡ್ಡಹೊಳೆ ಚತುಷ್ಪಥ ಹೆದ್ದಾರಿಗಾಗಿ ಇವರ ಬಾವಿಯೂ ಹೋಗುವಂತಾಯಿತು. ಇವರಿಗೆ ಬಾವಿ ಇದ್ದರೂ ಅವರು ಗ್ರಾ.ಪಂ.ನ ಕುಡಿಯುವ ನೀರಿನ ಸಂಪರ್ಕವನ್ನು ಮೊದಲೇ ಪಡೆದುಕೊಂಡಿದ್ದರು. ಚತುಷ್ಪಥ ಹೆದ್ದಾರಿಯ ಕಾಮಗಾರಿ ಸಂದರ್ಭ ಆ ಪರಿಸರದಲ್ಲಿ ಹಲವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿತು. ಇದರೊಂದಿಗೆ ಕೆ.ರಾಜನ್ ಅವರ ಕುಡಿಯುವ ನೀರಿನ ಸಂಪರ್ಕವೂ ಕಡಿತಗೊಂಡಿತು. ಆದರೆ ಆ ಬಳಿಕ ಉಳಿದವರೆಲ್ಲರ ಕುಡಿಯುವ ನೀರಿನ ಸಂಪರ್ಕವನ್ನು ಗ್ರಾ.ಪಂ. ಮರು ಜೋಡಿಸಿದ್ದರೆ, ಕೆ. ರಾಜನ್ ಅವರ ಕುಡಿಯುವ ನೀರಿನ ಸಂಪರ್ಕವನ್ನು ಮರುಜೋಡಿಸಲೇ ಇಲ್ಲ. ರಾಜನ್ ಅವರು ನನಗೂ ಕುಡಿಯುವ ನೀರಿನ ಸಂಪರ್ಕವನ್ನು ಮರುಜೋಡಿಸಿ ಕೊಡಿ ಎಂದು ಎಷ್ಟು ಗೋಗರೆದರೂ ಗ್ರಾ.ಪಂ. ಮಾತ್ರ ಅವರಿಗೆ ಕುಡಿಯುವ ನೀರಿನ ಸಂಪರ್ಕವನ್ನು ಮರುಜೋಡಿಸಿಕೊಡಲು ಮುಂದಾಗಲೇ ಇಲ್ಲ ಎಂದು ತಿಳಿದುಬಂದಿದೆ. ಅನಿವಾರ್ಯವಾಗಿ ಮನೆ ಬಳಿಯೇ ಹರಿಯುತ್ತಿರುವ ಕುಮಾಧಾರ ನದಿಯ ಕೆಸರು ನೀರನ್ನೇ ಅವರು ಕುಡಿಯುವುದಕ್ಕೆ ಆಶ್ರಯಿಸುವಂತಾಗಿದೆ.

ಅರ್ಜಿಯ ಮೇಲೆ ಅರ್ಜಿ: ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡ ಮೇಲೆ ಬಂದ ಎರಡು ತಿಂಗಳ ಬಿಲ್ ಅನ್ನು ಬಾಕಿವುಳಿಸಿಕೊಂಡಿರುವುದು ಬಿಟ್ಟರೆ, ಉಳಿದ ಎಲ್ಲಾ ಬಿಲ್‍ಗಳನ್ನು ಅವಧಿಗೆ ಸರಿಯಾಗಿ ಕಟ್ಟಿದರೂ ತನಗೆ ಯಾಕೆ ಗ್ರಾ.ಪಂ. ಕುಡಿಯುವ ನೀರನ್ನು ನೀಡುತ್ತಿಲ್ಲ ಎಂದ ಕೆ. ರಾಜನ್ ಅವರು 34 ನೆಕ್ಕಿಲಾಡಿ ಗ್ರಾ.ಪಂ.ಗೆ ಲಿಖಿತವಾಗಿ ಅರ್ಜಿಗಳನ್ನು ಹಾಕಿದರು. ಕುಡಿಯುವ ನೀರಿನ ಸಂಪರ್ಕ ಮರುಜೋಡಿಸಿ ಕೊಡದಿದ್ದರೆ, ನನಗೊಂದು ಹೊಸ ಕುಡಿಯುವ ನೀರಿನ ಸಂಪರ್ಕವನ್ನಾದರೂ ಕೊಡಿ ಎಂದು ಎರಡ್ಮೂರು ಬಾರಿ ಗ್ರಾ.ಪಂ.ಗೆ ಅರ್ಜಿ ಹಾಕಿದರೂ. ಆದರೆ ಯಾವುದಕ್ಕೂ ಗ್ರಾ.ಪಂ. ಉತ್ತರವನ್ನೂ ನೀಡಿಲ್ಲ ಎಂದು ತಿಳಿದುಬಂದಿದೆ.

ತನಗೆ ಗ್ರಾ.ಪಂ.ನಿಂದ ಆದ ಅನ್ಯಾಯವನ್ನು ಸರಿಮಾಡಿಸಿಕೊಡಿ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಜಿ.ಪಂ., ಪುತ್ತೂರು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಗೃಹ ಸಚಿವರಿಗೂ ದೂರು ಅರ್ಜಿ ಹಾಕಿದರು. ಈ ದೂರಿನ ಬಗ್ಗೆ ಸೂಕ್ತ ಕ್ರಮವಹಿಸುವ ಕುರಿತು ಈ ದೂರನ್ನು ಗ್ರಾ.ಪಂ.ಗೆ ವರ್ಗಾಯಿಸಿದೆ ಎಂದು ಇಲಾಖೆಗಳಿಂದ ಇವರು ಹಾಕಿದ ಅರ್ಜಿಗೆ ಹಿಂಬರಹ ಬಂದಿದ್ದು ಬಿಟ್ಟರೆ, ಇನ್ಯಾವ ಪ್ರಯೋಜನವೂ ಇವರಿಗೆ ಆಗಿಲ್ಲ.

ಪ್ರಧಾನಿಗೆ ದೂರು: ಕೊನೆಗೆ ಏಳನೇ ತರಗತಿಯ ಇವರ ಪುತ್ರ ತಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿಕೊಡಬೇಕು. ನಮಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡಬೇಕು ಎಂದು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಮೂಲಕ ಪ್ರಧಾನ ಮಂತ್ರಿಯವರ ಕಾರ್ಯಾಲಯಕ್ಕೆ ದೂರು ನೀಡಿದ್ದ. ಆ ದೂರು ದ.ಕ. ಜಿಲ್ಲಾ ಪಂಚಾಯತ್‍ಗೆ ವರ್ಗಾವಣೆಯಾಗಿದ್ದು, ಜಿ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಪ್ರಧಾನಿಯವರಿಗೆ ನೀಡಿದ ದೂರನ್ನು ಉಲ್ಲೇಖಿಸಿ ಇದಕ್ಕೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಗ್ರಾ.ಪಂ. ಪಿಡಿಒಗೆ ಆದೇಶಿಸಿದ್ದರು. ಅದಾಗಿ 4 ತಿಂಗಳಾಗುತ್ತ ಬಂದರೂ ಗ್ರಾ.ಪಂ.ನಿಂದ ಯಾವುದೇ ಕ್ರಮವಾಗದಿರುವುದು ಮಾತ್ರ ವಿಪರ್ಯಾಸ.

ಒಟ್ಟಿನಲ್ಲಿ ಅಧಿಕಾರಿಗಳ ಉದ್ಧಟತನ, ಬೇಜಾವಬ್ದಾರಿಯಿಂದಾಗಿ ರಾಜನ್ ಅವರಿಗೆ ನ್ಯಾಯವೆನ್ನುವುದು ಮರಿಚಿಕೆಯಾಗಿದ್ದು, ಮೂಲಭೂತ ಸೌಕರ್ಯವಾದ ಶುದ್ಧಜಲ ದೊರೆಯದೇ ನದಿಯ ಕೆಸರ ನೀರನ್ನು ಕುಡಿಯುವ ಸ್ಥಿತಿ ಬಂದಿದೆ. ಗ್ರಾ.ಪಂ.ನ ತಾರತಮ್ಯ ಧೋರಣೆಯಿಂದ ನ್ಯಾಯ ಸಿಗದೇ ಪ್ರಜಾಪ್ರಭುತ್ವ ರಾಷ್ಟ್ರದ ನಾಗರಿಕನೋರ್ವನ ಬದುಕು ದುಸ್ತರವಾಗುವಂತಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.

ಈ ತಾರತಮ್ಯ ಧೋರಣೆ ಯಾಕೆ? : ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಸಂದರ್ಭ ಇದೇ ಮುಖ್ಯ ಪೈಪ್‍ನಿಂದ ಸಂಪರ್ಕವಿದ್ದ ಹಲವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿದ್ದರೂ, ಅವರಿಗೆ ಮರು ಸಂಪರ್ಕವನ್ನು ಗ್ರಾ.ಪಂ. ತಕ್ಷಣ ನೀಡಿದೆ. ಆದರೆ ನಾನು ಸಮಾರು ಒಂದೂವರೆ ವರ್ಷದಿಂದ ಹಲವು ಬಾರಿ ಮನವಿ ಮಾಡಿದರೂ, ಹಲವರಿಗೆ ದೂರು ನೀಡಿದರೂ, ನನಗೆ ಕುಡಿಯುವ ನೀರಿನ ಸಂಪರ್ಕ ನೀಡಲು ಗ್ರಾ.ಪಂ. ಮುಂದಾಗಿಲ್ಲ. ನನಗೆ ನೀರಿನ ಸಂಪರ್ಕ ನೀಡುವುದು ಕಷ್ಟವೇನಲ್ಲ. ನನ್ನ ಜಾಗದ ಬಳಿಯೇ ಮುಖ್ಯ ಪೈಪ್‍ಲೈನ್ ಇದ್ದು, ಇತರರಿಗೆ ನೀಡಿದಂತೆ ನನಗೂ ಅದರಿಂದ ಸಂಪರ್ಕ ನೀಡಿದರೆ ಮುಗಿಯಿತು. ಆದರೆ ಗ್ರಾ.ಪಂ. ಮಾತ್ರ ಅದಕ್ಕೆ ಮುಂದಾಗುತ್ತಲೇ ಇಲ್ಲ. ತಾನು ತನ್ನ  ಹನ್ನೆರಡರ ಹರೆಯದ ಪುತ್ರನೊಂದಿಗೆ ವಾಸವಿದ್ದು, ಬದುಕಿಗಾಗಿ ನನಗೊಂದು ಮನೆ ಬಳಿಯೇ ಗ್ಯಾರೇಜಿತ್ತು. ಹಲವು ವರ್ಷದಿಂದ ನಾನು ಅದನ್ನು ನಡೆಸಿಕೊಂಡು ಬರುತ್ತಿದ್ದೆ. ಆದರೆ ಕಳೆದ ಎರಡು ವರ್ಷಗಳಿಂದ ನನ್ನ ಗ್ಯಾರೇಜ್‍ನ ಪರವಾನಿಗೆ ಗ್ರಾ.ಪಂ. ನವೀಕರಿಸಿಕೊಡುತ್ತಿಲ್ಲ.  ಕಾರಣ ಕೇಳಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಂದ ಒಪ್ಪಿಗೆ ಪತ್ರ ತನ್ನಿ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಇಲ್ಲಿ ಹಲವು ಕಟ್ಟಡಗಳು ಹೆದ್ದಾರಿಯ ಮಾರ್ಜಿನ್‍ನಲ್ಲೇ ಇದೆ. ಅದಕ್ಕೆ ಡೋರ್‍ನಂಬರ್, ವ್ಯಾಪಾರ ಪರವಾನಿಗೆ ಗ್ರಾ.ಪಂ. ನೀಡಿದೆ. ನನ್ನ ಗ್ಯಾರೇಜ್ ಕಟ್ಟಡದ ನೇರಕ್ಕೆ ಬರುವ ಹಲವು ಉದ್ಯಮಗಳಿಗೂ ಪರವಾನಿಗೆ ನೀಡಿದೆ. ಹಾಗಿದ್ದಾಗ ನನಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ಪತ್ರ ಯಾಕೆ? ನನಗೊಂದು ನ್ಯಾಯ? ಅವರಿಗೊಂದು ನ್ಯಾಯ ಯಾಕೆ?  ಎಂದು ಪ್ರಶ್ನಿಸುವ ರಾಜನ್, ಪರವಾನಿಗೆ ಸಿಗದಿರುವುದರಿಂದ ಗ್ಯಾರೇಜ್ ಅನ್ನು ಈಗ ಬಂದ್ ಮಾಡಲಾಗಿದ್ದು, ಇದರಿಂದ ನನ್ನ ಬದುಕಿಗೂ ಕಷ್ಟವಾಗಿದೆ ಎನ್ನುತ್ತಾರೆ.

ನ್ಯಾಯ ಸಮಾನವಾಗಿರಲಿ: ಅಬ್ದುರ್ರಹ್ಮಾನ್ ಯುನಿಕ್

ರಾಜನ್ ಅವರು ಈ ದೇಶದ ನಾಗರಿಕ. ಹೀಗಿರುವಾಗ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ನಡೆಯುವ ಗ್ರಾ.ಪಂ. ಇವರಿಗೇಕೆ ನ್ಯಾಯ ನೀಡಲು ಮುಂದಾಗುತ್ತಿಲ್ಲ? ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾವಿರಾರು ರೂಪಾಯಿ ನೀರಿನ ಬಿಲ್ ಪಾವತಿ ಮಾಡದ ಅದೆಷ್ಟೋ ಮಂದಿಯಿದ್ದಾರೆ. ಆದರೂ ಅವರ ಕುಡಿಯುವ ನೀರಿನ ಸಂಪರ್ಕ ಕಡಿತ ಮಾಡದ ಗ್ರಾ.ಪಂ. ಕುಡಿಯುವ ನೀರಿನ ಈ ಹಿಂದಿನ ಬಿಲ್‍ಗಳನ್ನು ಸರಿಯಾಗಿ ಕಟ್ಟಿದ್ದರೂ, ಅವರಿಗೆ ಯಾಕೆ ಮತ್ತೆ ನೀರಿನ ಸಂಪರ್ಕ ನೀಡುತ್ತಿಲ್ಲ. ಇವರ ಮನೆ ಬಳಿ ಹೆದ್ದಾರಿ ಕಾಮಗಾರಿಗಾಗಿ ಹಲವರ ನೀರಿನ ಸಂಪರ್ಕ ಕಡಿತಗೊಂಡಿದ್ದರೂ, ಅವರಿಗೆಲ್ಲಾ ಮತ್ತೆ ಅದನ್ನು ಮರುಜೋಡಿಸಿ ಕೊಡಲಾಗಿದೆ. ವ್ಯಾಪಾರ ಪರವಾನಿಗೆ ನೀಡುವಲ್ಲಿ ಕೂಡಾ ಇವರಿಗೆ ತಾರತಮ್ಯವೆಸಗಲಾಗಿದೆ. ಗ್ರಾ.ಪಂ. ನ್ಯಾಯವನ್ನು ಸಮಾನವಾಗಿ ಕಲ್ಪಿಸಬೇಕು. ಈ ರೀತಿಯ ಅನ್ಯಾಯವೆಸಗಿದರೆ ಗ್ರಾ.ಪಂ. ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾದೀತು.
- ಅಬ್ದುರ್ರಹ್ಮಾನ್ ಯುನಿಕ್
ಕಾರ್ಯದರ್ಶಿ, ನಮ್ಮೂರು- ನೆಕ್ಕಿಲಾಡಿ

ಈ ಬಗ್ಗೆ ಸ್ಪಷ್ಟನೆಗಾಗಿ ವಾರ್ತಾಭಾರತಿ ಉಪ್ಪಿನಂಗಡಿಯ ವರದಿಗಾರ 34ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಕುಮಾರಯ್ಯ ಅವರನ್ನು 3 ಬಾರಿ ಮೊಬೈಲ್ ಮೂಲಕ ಸಂಪರ್ಕಿಸಿದ್ದರೂ ಅವರ ಸಂಪರ್ಕ ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News