ಒಳಚರಂಡಿ, ಶೌಚಗುಂಡಿ ಸ್ವಚ್ಛತೆ ವೇಳೆ ಒಟ್ಟು 941 ಸಾವು: ಸಂಸತ್ ನಲ್ಲಿ ಕೇಂದ್ರದಿಂದ ಅಂಕಿಅಂಶ ಸಲ್ಲಿಕೆ

Update: 2021-08-04 17:39 GMT

ಹೊಸದಿಲ್ಲಿ, ಆ. 4: ಮ್ಯಾನುವಲ್ ಸ್ಕಾವೆಂಜಿಂಗ್ (ಮಲಹೊರುವಿಕೆ)ನಿಂದ ಸಾವು ಸಂಭವಿಸಿರುವ ಯಾವುದೇ ಪ್ರಕರಣಗಳು ವರದಿ ಯಾಗಿಲ್ಲವೆಂದು ಕೇಂದ್ರ ಸರಕಾರವು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದೆ. ಆದರೆ ಒಳಚರಂಡಿಗಳು ಹಾಗೂ ಸೆಪ್ಟಿಕ್ ಟ್ಯಾಂಕ್ ಗಳನ್ನು ಸ್ವಚ್ಛತೆಯ ಸಂದರ್ಭದಲ್ಲಿ ಒಟ್ಟು 941 ಮಂದಿ ಸಾವನ್ನಪ್ಪಿದ್ದಾರೆಂದು ವಿವಿಧ ರಾಜ್ಯಗಳು ಪ್ರಕಟಿಸಿರುವ ದತ್ತಾಂಶಗಳಿಂದ ತಿಳಿದುಬಂದಿರುವುದಾಗಿ ಅದು ಹೇಳಿದೆ. ತಮಿಳುನಾಡಿನಲ್ಲಿ 213 ಮಂದಿ ಶೌಚಗುಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಗುಜರಾತ್ (153) ಹಾಗೂ ಉತ್ತರ ಪ್ರದೇಶ (104) ರಾಜ್ಯಗಳು ಆನಂತರದ ಸ್ಥಾನಗಳಲ್ಲಿವೆ. ರಾಜಧಾನಿ ದಿಲ್ಲಿಯಲ್ಲಿ 98 ಮಂದಿ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಯ ವೇಳೆ ಸಾವನ್ನಪ್ಪಿದ್ದಾರೆ.

ಕೆಲಸದ ಸಂದರ್ಭದಲ್ಲಿ ಸಾವನ್ನಪ್ಪಿದ ಮ್ಯಾನುವಲ್ ಸ್ಕಾವೆಂಜರ್ಗಳ ದತ್ತಾಂಶಗಳು ಕೇಂದ್ರ ಸರಕಾರದ ಬಳಿ ಇವೆಯೇ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ , ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಮಾನವಸಂಪನ್ಮೂಲ ಸಚಿವ ವೀರೇಂದ್ರ ಕುಮಾರ್ ಅವರು ಮಾತನಾಡಿ, ಮ್ಯಾನುವಲ್ ಸ್ಕಾವೆಂಜಿಂಗ್ ನಿಂದಾಗಿ ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ ಒಳಚರಂಡಿಗಳು ಹಾಗೂ ಸೆಪ್ಟಿಕ್ ಟ್ಯಾಂಕ್ ಗಳ ಸ್ವಚ್ಛತೆಯ ಸಂದರ್ಭದಲ್ಲಿ ಕಾರ್ಮಿಕರ ಸಾವು ಸಂಭವಿಸಿರುವ ಬಗ್ಗೆ ವರದಿಗಳಿವೆ ಎಂದವರು ಹೇಳಿದರು.

ದೇಶದಲ್ಲಿ 2013ರಿಂದ 2018ರ ನಡುವಿನ ಅವಧಿಯಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಒಟ್ಟು 58,098 ಮಂದಿ ವ್ಯಕ್ತಿಗಳು ಮ್ಯಾನುವಲ್ ಸ್ಕಾವೆಂಜರ್ಗಳಾಗಿ ಕೆಲಸ ಮಾಡುತ್ತಿದ್ದಾರೆಂದು ಕೇಂದ್ರ ಸರಕಾರವು ಸಂಸತ್ತಿಗೆ ತಿಳಿಸಿದೆ.

ಗುರುತಿಸಲ್ಪಟ್ಟ ಎಲ್ಲಾ 59,098 ಮ್ಯಾನುವಲ್ ಸ್ಕಾವೆಂಜರ್ಗಳಿಗೆ ಒಂದೇ ಅವಧಿಗೆ 40 ಸಾವಿರ ರೂ. ನಗದು ನೆರವು ನೀಡಲಾಗಿದೆ. ಸುಮಾರು 16,057 ಮ್ಯಾನುವಲ್ ಸ್ಕಾವೆಂಜರ್ಗಳು ಹಾಗೂ ಅವರ ಅವಲಂಭಿತರು ಪುನರ್ವಸತಿ, ಕೌಶಲ್ಯಾಭಿವೃದ್ಧಿ ಹಾಗೂ ತರಬೇತಿಯನ್ನು ಒದಗಿಸಲಾಗಿದೆ ಎಂದು ವೀರೇಂದ್ರ ಕುಮಾರ್ ತಿಳಿಸಿದ್ದಾರೆ.

ಕಳೆದ ವಾರ ಶೌಚಗುಂಡಿ ಶುಚಿಮಾಡುವುದರ ಬಗ್ಗೆ ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಇಂತಹದೇ ಪ್ರಶ್ನೆಗೆ ಸರಕಾರ ನೀಡಿದ ಉತ್ತರವು ಭಾರೀ ವಿವಾದಕ್ಕೆ ಕಾರಣವಾಗಿತ್ತು. 2013ರ ಮ್ಯಾನುವಲ್ ಸ್ಕಾವೆಂಜರ್ ಉದ್ಯೋಗ ಹಾಗೂ ಅವರ ಪುನರ್ವಸತಿ ಕಾಯ್ದೆಯು ಈ ಪದ್ದತಿಯನ್ನು ನಿಷೇಧಿಸಿತ್ತು. ಜುಲೈ 28ರಂದು ರಾಜ್ಯಸಭೆಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠವಳೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕಳೆದ ಐದು ವರ್ಷಗಳಲ್ಲಿ ಮ್ಯಾನುವಲ್ ಸ್ಕಾವೆಂಜಿಂಗ್ ನಿಂದಾಗಿ ಯಾವುದೇ ಸಾವು ಸಂಭವಿಸಿರಲಿಲ್ಲವೆಂದು ತಿಳಿಸಿದ್ದುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ವಿವಿಧ ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದರು. ಸಚಿವರ ಹೇಳಿಕೆಯು, ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದಾಗಿ ಯಾರೂ ಸಾವನ್ನಪ್ಪಿಲ್ಲವೆಂದು ಇತ್ತೀಚೆಗೆ ಸರಕಾರ ನೀಡಿದ ಹೇಳಿಕೆಗೆ ಸಮಾನವಾಗಿದೆ ಎಂದು ವ್ಯಂಗ್ಯವಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News