ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡಿರುವ ವಿದ್ಯಾರ್ಥಿನಿ ಸಿಬಿಎಸ್ ಇ ಪರೀಕ್ಷೆಯಲ್ಲಿ ಅದ್ಭುತ ಸಾಧನೆ

Update: 2021-08-04 18:22 GMT
ಚಿಕ್ಕಪ್ಪ-ಚಿಕ್ಕಮ್ಮನೊಂದಿಗೆ ವನಿಶಾ, photo: Free press journal

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನ ವನಿಶಾ ಪಾಠಕ್ ಹತ್ತನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಇಂಗ್ಲಿಷ್, ಸಂಸ್ಕೃತ, ವಿಜ್ಞಾನ ಹಾಗೂ ಸಾಮಾಜಿಕ ವಿಜ್ಞಾನ ವಿಷಯಗಳಲ್ಲಿ 100 ಅಂಕಗಳನ್ನು ಗಳಿಸಿದರೆ, ಗಣಿತದಲ್ಲಿ 97 ಅಂಕ ಗಳಿಸಿದ್ದಾರೆ. ಶೇ.99.8 ಅಂಕ ಗಳಿಸುವ  ಮೂಲಕ ನಗರದಲ್ಲಿ ಟಾಪರ್ ಗಳ ಪೈಕಿ ಒಬ್ಬರಾಗಿದ್ದಾರೆ. ಇದು ಯಾವುದೇ ವಿದ್ಯಾರ್ಥಿಯ  ಅದ್ಭುತವಾದ ಸಾಧನೆ. ಆದರೆ  ಮೇ ತಿಂಗಳಲ್ಲಿ ಕೋವಿಡ್ -19ನಿಂದಾಗಿ ಹೆತ್ತವರನ್ನು ಕಳೆದುಕೊಂಡಿರುವ 16 ವರ್ಷದ ಬಾಲಕಿ ಸಂಭ್ರಮಪಡುವ ಬದಲು ಹೆತ್ತವರನ್ನು ನೆನಪಿಸಿಕೊಳ್ಳುತ್ತಾ ಸಂಕಟಪಡುವಂತಾಗಿದೆ.

ಎರಡು ತಿಂಗಳ ಹಿಂದೆ ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ, ಬಾಲಕಿಗೆ ಇಡೀ ಜಗತ್ತು ಕತ್ತಲಲ್ಲಿ ಮುಳುಗಿದಂತಾಗಿತ್ತು. ಬಾಲಕಿಯ ಪೋಷಕರು ಕೆಲವೇ ದಿನಗಳ ಅಂತರದಲ್ಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಒಂದು ಕಾಲದಲ್ಲಿ ಗದ್ದಲ ಹಾಗೂ  ಹರ್ಷಚಿತ್ತದಿಂದ ಇದ್ದ ಮನೆಯೊಂದು ಛಿದ್ರವಾಯಿತು. ಇದ್ದಕ್ಕಿದ್ದಂತೆ, ಬಾಲಕಿ ಹಾಗೂ ಆಕೆಯ  10 ವರ್ಷದ ಸಹೋದರ ವಿವನ್ ಅನಾಥರಾದರು. ದೃತಿಗಡೆದ ಬಾಲಕಿ ತನ್ನ ಸಹೋದರನಿಗೆ  ನಾನೇ ಆಸರೆ  ಎಂದು ಅರಿತುಕೊಂಡಿದ್ದಳು.

“ನನ್ನ ಹೆತ್ತವರ ನೆನಪು ಸ್ಪಷ್ಟವಾಗಿ ನನ್ನನ್ನು ಪ್ರೇರೇಪಿಸಿದೆ ಹಾಗೂ  ನನ್ನ ಜೀವನದುದ್ದಕ್ಕೂ ನನ್ನನ್ನು ಪ್ರೇರೇಪಿಸುತ್ತದೆ (ಆದರೆ) ಇದೀಗ ನನಗೆ ಆತ(ಸಹೋದರ) ಅತಿ ದೊಡ್ಡ ಪ್ರೇರಣೆಯ ಮೂಲವಾಗಿದ್ದಾನೆ ... ನಾನು ಏನನ್ನಾದರೂ ಮಾಡಬೇಕಾಗಿದೆ. ನನ್ನ ತಾಯಿ ನನಗೆ ಕೊನೆಯದಾಗಿ ಹೇಳಿದ್ದು 'ನಿಮ್ಮನ್ನು ನಂಬಿರಿ ... ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ' ಎಂದು. ನನ್ನ ತಂದೆಯ ಕೊನೆಯ ಮಾತುಗಳು “ಬೇಟಾ, ಹಿಮ್ಮತ್ ರಖ್ನಾ' (ನನ್ನ ಮಗುವೇ ಧೈರ್ಯವಾಗಿರು) ಎನ್ನುವುದಾಗಿತ್ತು'' ಎಂದು ವನಿಶಾ  ಪಾಠಕ್ NDTVಗೆ ತಿಳಿಸಿದರು.

ವನಿಶಾ ಪಾಠಕ್ ಅವರ ತಂದೆ  ಜಿತೇಂದ್ರ ಕುಮಾರ್ ಪಾಠಕ್ ಆರ್ಥಿಕ ಸಲಹೆಗಾರರಾಗಿದ್ದರು ಹಾಗೂ ಆಕೆಯ ತಾಯಿ ಡಾ, ಸೀಮಾ ಪಾಠಕ್ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.

ತಂದೆ-ತಾಯಿ ಇಬ್ಬರು ಒಟ್ಟಿಗೆ ಆಸ್ಪತ್ರೆಗೆ ಹೋಗುತ್ತಿದ್ದಾಗ ಅವರನ್ನು ಕೊನೆಯ ಬಾರಿ ಜೀವಂತವಾಗಿ ನೋಡಿದ್ದೇನೆ. ತದನಂತರ ಭಯಾನಕ ಸುದ್ದಿ ಬಂತು. ನನ್ನ ತಂದೆ ನನ್ನನ್ನು ಐಐಟಿಯಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ನೋಡಲು ಅಥವಾ ಯುಪಿಎಸ್‌ಸಿಯನ್ನು ಪಾಸ್ ಮಾಡಲು ಹಾಗೂ ರಾಷ್ಟ್ರದ ಸೇವೆ ಮಾಡಲು ಬಯಸಿದ್ದರು. ಅವರ ಕನಸು ಈಗ ನನ್ನ ಕನಸಾಗಿದೆ" ಎಂದು ಬಾಲಕಿ  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News