ಅಧಿಕಾರಿಗಳು ಸ್ಥಳೀಯ ಭಾಷೆ ಕಲಿತರೆ ಕರ್ತವ್ಯಕ್ಕೆ ಸಹಕಾರ: ಕಮಿಷನರ್ ಎನ್. ಶಶಿಕುಮಾರ್

Update: 2021-08-05 11:49 GMT

ಮಂಗಳೂರು, ಆ. 5: ಪೊಲೀಸರು ಸ್ಥಳೀಯ ಭಾಷೆಗಳನ್ನು ಬಲ್ಲವರಾಗಿದ್ದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಅಪರಾಧ ಪತ್ತೆ ಮತ್ತು ಗುಪ್ತ ಮಾಹಿತಿ ಸಂಗ್ರಹದಂತಹ ಕೆಲಸಗಳು ಹೆಚ್ಚು ಸುಲಭ ಸಾಧ್ಯವಾಗುತ್ತದೆ ಎಂದು ನಗರದ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಹೇಳಿದ್ದಾರೆ.

ಅವರು ಗುರುವಾರ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಗೆ ತುಳು ಭಾಷೆಯನ್ನು ಕಲಿಸುವ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದಲ್ಲಿ ಏರ್ಪಡಿಸಿರುವ ಒಂದು ತಿಂಗಳ ಅವಧಿಯ ತುಳು ಕಲಿಕಾ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರಿನ ಜನರ ಭಾವನೆಗಳನ್ನು ಅರ್ಥ ಮಾಡಿ, ಅವರ ಸಾಮಿಪ್ಯದಲ್ಲಿ ಕೆಲಸ ಮಾಡ ಬೇಕಾದರೆ ತುಳು ಕಲಿಯುವುದು ಅವಶ್ಯ. ಅಧಿಕಾರಿಗಳು ಮತ್ತು ಸಿಬಂದಿ ಕನಿಷ್ಟ ತುಳುವಿನಲ್ಲಿ ಮಾತನಾಡಲು ಕಲಿಯಬೇಕು. ತೀರಾ ಇತ್ತೀಚೆಗೆ ಸೇರಿದ 50 ಮಂದಿ ಪೊಲೀಸರಿಗೆ ಮೊದಲ ಹಂತದಲ್ಲಿ ಆ. 5 ರಿಂದ ಸೆ. 4 ರ ವರೆಗಿನ ಅವಧಿಯಲ್ಲಿ ತುಳು ಭಾಷೆಯನ್ನು ಕಲಿಸಲಾಗುತ್ತಿದೆ. ಅಗತ್ಯ ಬಿದ್ದರೆ ಮುಂದೆ ಇನ್ನೊಂದು ತಂಡಕ್ಕೂ ಇದನ್ನು ವಿಸ್ತರಿಸುವ ಉದ್ದೇಶವಿದೆ ಎಂದು ಎನ್. ಶಶಿಕುಮಾರ್ ಹೇಳಿದರು.

ಸಂಸ್ಕೃತಕ್ಕೆ ಲಿಪಿ ಕೊಟ್ಟದ್ದು ತುಳು: ದಯಾನಂದ್ ಕತ್ತಲ್‌ ಸಾರ್ 

ತುಳು ಲಿಪಿಗೆ ಸ್ವತಂತ್ರ ಲಿಪಿ ಇದೆ. ತುಳು ಭಾಷೆಗೆ 2000 ವರ್ಷಗಳ ಹಾಗೂ ತುಳು ಲಿಪಿಗೆ 1200 ವರ್ಷಗಳ ಚರಿತ್ರೆ ಇದೆ. ಸಂಸ್ಕೃತಕ್ಕೆ ಲಿಪಿ ಕೊಟ್ಟದ್ದು ತುಳು. ಮಲಯಾಳ ಲಿಪಿಯ ಮೂಲ ಕೂಡಾ ತುಳು. ತುಳು ಭಾಷೆಗೆ ರಾಜ್ಯ ಮತ್ತು ರಾಷ್ಟ್ರ ಭಾಷೆ ಎಂಬ ಮಾನ್ಯತೆ ಸಿಕ್ಕಿದೆ. ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದು ಕಾರ್ಯಾಗಾರವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ ಸಾರ್ ಹೇಳಿದರು.

ಸರಕಾರಿ ಉದ್ಯೋಗದಲ್ಲಿ ಇರುವವರು ಪ್ರಾದೇಶಿಕ ಭಾಷೆ ಕಲಿಯುವ ಆವಶ್ಯಕತೆ ಇದ್ದು, ಈ ದಿಶೆಯಲ್ಲಿ ಎಲ್ಲಾ ಸರಕಾರಿ ಇಲಾಖೆಗಳ ಸಿಬ್ಬಂದಿಗೆ ತುಳು ಕಲಿಸುವ ಯೋಜನೆ ಇದೆ. ಪೊಲೀಸ್ ಆಯುಕ್ತರು ಇಚ್ಛಾ ಶಕ್ತಿಯನ್ನು ತೋರಿ ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಪೊಲೀಸರಿಗೆ ತುಳು ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತುಳು ಕಲಿಸಲು ಪಠ್ಯವನ್ನು ತಯಾರಿಸಲಾಗಿದೆ ಎಂದು ಅವರು ಹೇಳಿದರು.
ತುಳು ಲಿಪಿ ಬಳಕೆಗೆ ಉತ್ತೇಜನ ನೀಡ ಬೇಕೆಂದ ಅವರು, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತುಳು ಲಿಪಿಯಲ್ಲಿ ನಾಮ ಫಲಕ ಹಾಕುವಂತೆ ಸಲಹೆ ಮಾಡಿದರು.

ಡಿಸಿಪಿ ದಿನೇಶ್ ಕುಮಾರ್ (ಸಂಚಾರ ಮತ್ತು ಅಪರಾಧ ವಿಭಾಗ) ಮತ್ತು ಚನ್ನಬಸಪ್ಪ ಹಡಪದ್ (ನಗರ ಸಶಸ್ತ್ರ ಮೀಸಲು ಪಡೆ) ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾರ ವಿಭಾಗದ ಎಸಿಪಿ ನಟರಾಜ್ ಎಂ.ಎ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸೆಂಟ್ರಲ್ ವಿಭಾಗದ ಎಸಿಪಿ ಪಿ.ಎ. ಹೆಗಡೆ ವಂದಿಸಿದರು.

ತುಳು ಕಲಿಕಾ ಕಾರ್ಯಾಗಾರದಲ್ಲಿ 50 ಮಂದಿ

ವಿಜಯಪುರ ಜಿಲ್ಲೆಯ 8 ಮಂದಿ, ಹಾವೇರಿಯ 7 ಜನ, ಬೆಳಗಾವಿಯ 6 ಮಂದಿ, ಚಿಕ್ಕಮಗಳೂರು, ಬಾಗಲ್ಕೋಟೆ ಮತ್ತು ಬಳ್ಳಾರಿಯ ತಲಾ 4 ಜನ, ದಾವಣಗೆರೆಯ 3 ಮಂದಿ, ಕಲಬುರಗಿ, ಕೊಪ್ಪಳ, ಶಿವಮೊಗ್ಗ, ಹಾಸನ ಮತ್ತು ಮೈಸೂರಿನ ತಲಾ ಇಬ್ಬರು, ಯಾದಗಿರಿ, ಉತ್ತರ ಕನ್ನಡ, ಕೊಡಗು, ಗದಗ, ಜಿಲ್ಲೆಯ ತಲಾ ಒಬ್ಬರು ಸೇರಿದಂತೆ 16 ಜಿಲ್ಲೆಗಳ ಒಟ್ಟು 50 ಮಂದಿ ತುಳು ಕಲಿಕಾ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News