ರಾಜ್ಯದ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ : ರೋಮಿ ಭಾಟಿ

Update: 2021-08-05 12:43 GMT

ಉಡುಪಿ, ಆ.5: ಜನತೆಯ ಆಶಯಕ್ಕೆ ತಕ್ಕಂತೆ ಆಮ್ ಆದ್ಮಿ ಪಾರ್ಟಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ನಿರ್ಧರಿಸಿದ್ದು, ಇನ್ನು ಮುಂದೆ ಪಕ್ಷ ಪ್ರತಿಯೊಂದು ಚುನಾವಣೆಯಲ್ಲೂ ಸ್ಪರ್ಧಿಸಲಿದೆ. ಇದರಂತೆ ಆಮ್‌ ಆದ್ಮಿ ಪಾರ್ಟಿ ರಾಜ್ಯದಲ್ಲಿ ಮುಂಬರುವ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಸ್ಪರ್ಧಿಸಲಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ವೀಕ್ಷಕರಾದ ದೆಹಲಿಯ ರೋಮಿ ಭಾಟಿ ಹೇಳಿದ್ದಾರೆ.

ಉಡುಪಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಸಂಘಟನೆಯನ್ನು ಚುರುಕು ಗೊಳಿಸುವ ನಿಟ್ಟಿನಲ್ಲಿ ದೆಹಲಿ ನಿಯೋಗವು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸುತ್ತಿದೆ. ಸಮರ್ಥ ಕಾರ್ಯಕರ್ತರನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನಾಗಿ ನೇಮಕ ಮಾಡುವ ಮೂಲಕ ಸಂಘಟನೆಯನ್ನು ಚುರುಕು ಗೊಳಿಸಲಾಗುತ್ತದೆ. ಆ ಮೂಲಕ ಮುಂಬರುವ ಎಲ್ಲ ಚುನಾವಣೆಗಳನ್ನು ಎದುರಿಸಲು ಪಕ್ಷವನ್ನು ಸನ್ನದ್ದಗೊಳಿಸಲಾಗುತ್ತದೆ ಎಂದು ರೋಮಿ ಭಾಟಿ ನುಡಿದರು.

ಇದರಂತೆ ಉಡುಪಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಉತ್ತಮ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಲಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಮುಂದೆ ಬಂದಿದ್ದು, ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಲವಾರು ಜನರು ಸಹ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಇಚ್ಛಿಸಿ ಪಕ್ಷವನ್ನು ಸಂಪರ್ಕಿಸಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಉಡುಪಿ ಜಿಲ್ಲೆಯ ಜನತೆ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಕರ್ನಾಟಕದ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ. ರಾಜ್ಯದ ಇತರ ಭಾಗಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದ ಇತರ ನಗರಗಳಲ್ಲಿಯೂ ದೇಶ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳು ತಮ್ಮ ನೆಲೆಯನ್ನು ವಿಸ್ತರಿಸಲು ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಬದಲಾವಣೆಯನ್ನು ತರುವ ಸಲುವಾಗಿ ಜಿಲ್ಲಾ ಹಾಗೂ ತಾ.ಪಂ. ಚುನಾವಣೆ ಅತ್ಯಂತ ಮಹತ್ವದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ, ಜೊತೆ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಉಡುಪಿ-ದ.ಕ. ಜಿಲ್ಲಾ ವೀಕ್ಷಕ ಅಶೋಕ ಎಡಮಲೆ, ಉಡುಪಿ ನಗರ ಸಂಯೋಜಕ ಆಶ್ಲೇ ಕರ್ನೇಲಿಯೋ, ಜಯಕಿಶನ್ ಉಪಸ್ಥಿತರಿದ್ದರು.

ದೇಶದಲ್ಲಿಂದು ಎರಡು ಮಾದರಿ ಸರಕಾರಗಳು

ದೇಶದ ಮುಂದೆ ಇಂದು ಎರಡು ಮಾದರಿ ಸರಕಾರಗಳಿವೆ. ಒಂದು ಉದ್ಯಮಪತಿಗಳ ಖಜಾನೆ ತುಂಬಿಸುತ್ತಿರುವ ಗುಜರಾತ್ ಮಾದರಿ ಸರಕಾರ, ಇನ್ನೊಂದು ಜನರು ಕಟ್ಟುವ ತೆರಿಗೆಯಿಂದ ಜನತೆಗೆ ಆರೋಗ್ಯ, ನೀರು, ಶಿಕ್ಷಣ, ವಿದ್ಯುತ್ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ನೀಡಿ ಜನರಿಗೆ ಅನುಕೂಲ ಮಾಡಿಕೊಡುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಮಾದರಿ ಸರಕಾರ ಎಂದು ದೆಹಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ವೀಕ್ಷಕ ರೋಮಿ ಭಾಟಿ ತಿಳಿಸಿದರು.

ದೇಶದ ಜನತೆ ಭ್ರಷ್ಟ ರಾಜಕೀಯ ಪಕ್ಷಗಳಿಂದ ಬೇಸತ್ತಿದ್ದು, ಆಮ್ ಆದ್ಮಿ ಪಕ್ಷವನ್ನು ಪರ್ಯಾಯ ರಾಜಕೀಯ ಪಕ್ಷವಾಗಿ ನೋಡುತಿದ್ದಾರೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News