ಲಾಕ್ ಡೌನ್ ನಲ್ಲಿ ಹುಟ್ಟಿದ ಆಸಕ್ತಿ: ಮಲ್ಲಿಗೆ ಬೆಳೆದು ಸಾವಿರಾರು ರೂ. ಗಳಿಸುವ ವಕೀಲೆ ಕಿರಣ

Update: 2021-08-05 15:40 GMT

ಮಂಗಳೂರು : ಸುವಾಸನೆಯಿಂದಲೇ ಮನಸೂರೆಗೊಳ್ಳುವ ಮಲ್ಲಿಗೆಯು ಹೂವುಗಳಲ್ಲೇ ಅತ್ಯಂತ ವಿಶಿಷ್ಟ ಹಾಗೂ ಶ್ರೇಷ್ಠ ಸ್ಥಾನ ಅಲಂಕರಿಸಿದೆ. ತಾಳ್ಮೆ, ಮುತುವರ್ಜಿಯ ಜೊತೆಗೆ ಮಗುವಿನಂತೆ ಆರೈಕೆ ಮಾಡಿದರೆ ಮಲ್ಲಿಗೆ ಬೆಳೆ ಸೋಂಪಾಗಿ ಬೆಳೆದು ಘಮಲು ಸೂಸಲು ತಡವಾಗಲ್ಲ. ಇದು ಅಕ್ಷರಶಃ ಸತ್ಯ ಎನ್ನುವುದಕ್ಕೆ ನಿದರ್ಶನವೇ ತಾರಸಿ ಕೈತೋಟದಲ್ಲಿ ನ್ಯಾಯವಾದಿಯ ಮಲ್ಲಿಗೆಯ ಪರಿಮಳ.

ಮಂಗಳೂರಿನ ಕೊಂಚಾಡಿಯ ಕಿರಣ ಎಂಬವರು ವೃತ್ತಿಯಲ್ಲಿ ನ್ಯಾಯವಾದಿ. ಇವರು ತಮ್ಮ ಎರಡು ಅಂತಸ್ತಿನ ಮನೆಯ ಮೇಲಿನ ತಾರಸಿಯಲ್ಲಿ ಮಲ್ಲಿಗೆ ಹೂ ಬೆಳೆದು ಹೆಮ್ಮೆಯ ಬಿಗುಮಾನದಿಂದ ಝಣಝಣ ಕಾಂಚಾಣ ಎಣಿಸುತ್ತಿದ್ದರೆ, ಅತ್ತ ವಠಾರದವರದ್ದು ಮಲ್ಲಿಗೆಯ ಘಮಲಿನಲ್ಲಿ ಮಿಂದೇಳುವ ತವಕ.

ಕೋವಿಡ್ ಅಲೆಯ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತುಕೊಳ್ಳುವುದು 'ಆರೋಗ್ಯವೇ ಭಾಗ್ಯ' ಎನ್ನುವಂತಿತ್ತು ಲಾಕ್‌ಡೌನ್‌ನ ಮಾರ್ಗಸೂಚಿ. ಈ ವೇಳೆ ಸುಮ್ಮನೆ ಕುಳಿತಾಗ ತಲೆಗೆ ಹೊಳೆದದ್ದೇ ಈ ಪುಷ್ಪ ಕೃಷಿ. ಇವರಿಗೆ ಹೂಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಮಲ್ಲಿಗೆಯ ಘಮಲಿಗೆ ಸೋತ ನ್ಯಾಯವಾದಿ ಕಿರಣ ಕೊನೆಗೂ ಮಲ್ಲಿಗೆ ಬೆಳೆದು ಪ್ರತಿ ತಿಂಗಳು ಆದಾಯ ಗಳಿಸುತ್ತಿದ್ದಾರೆ.

ಕಿರಣ ಅವರಿಗೆ ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಇತ್ತು. ಆದರೆ ಕೃಷಿ ಮಾಡುವಾಗ ನಿರ್ವಹಣೆ, ಪೋಷಣೆ, ಮಾಹಿತಿಯ ಕೊರತೆ ಇತ್ತು. ಆದಾಯ ಬಾರದೆ ಕೈಕೊಡುತ್ತದೆಯೋ ಎನ್ನುವ ಆಲೋಚನೆಗಳ ನಡುವೆ ಇವರನ್ನು ಆಕರ್ಷಿಸಿದ್ದುದು ಇದೇ ಮಲ್ಲಿಗೆ ಹೂ. ಇವರು ಸ್ವಲ್ಪವೇ ಜಾಗದಲ್ಲಿ ಮಲ್ಲಿಗೆ ಕೃಷಿ ಮಾಡಿ ಸೈ ಎನಿಸಿಕೊಂಡರು.

''ಚೆಲ್ಲಿದರು ಮಲ್ಲಿಗೆಯಾ...ಎನ್ನುತ್ತಾ 'ವಾರ್ತಾಭಾರತಿ' ಜೊತೆ ಮಾತನಾಡಿದ ಹವ್ಯಾಸಿ ಕೃಷಿಕ ಮಹಿಳೆ ಅಡ್ವೊಕೇಟ್ ಕಿರಣ, 'ಲಾಕ್‌ಡೌನ್ ಸಂದರ್ಭದಲ್ಲಿ ತುಂಬಾ ಜನರು ಇದ್ದ ಕೆಲಸ ಹೋಯಿತು. ಜೀವನ ಸಾಗಿಸುವುದು ಹೇಗೆ ಅಂತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವವರೇ ಅಧಿಕ. ಕೊರೋನದ ಕರಿ ಛಾಯೆಗೆ ಕೋರ್ಟು ಕಲಾಪಗಳು ಸ್ಥಗಿತಗೊಂಡಿದ್ದವು. ಕೃಷಿ ಮಾಡುವುದು ನನ್ನ ಮನದಾಸೆಯಾಗಿತ್ತು. ಲಾಕ್‌ಡೌನ್‌ನಲ್ಲಿ ಕೊನೆಗೂ ಅದು ಕಾರ್ಯರೂಪಕ್ಕೆ ಬಂದಿತು' ಎನ್ನುತ್ತಾರೆ ಅವರು.

ಎರಡು ಅಂತಸ್ತಿನ ಮನೆ ಮೇಲಿನ ತಾರಸಿಯಲ್ಲಿ ಪಂಪ್‌ವೆಲ್‌ನ ನರ್ಸರಿಯಿಂದ ತಂದ ಮಲ್ಲಿಗೆಯ ಸಸಿಗಳನ್ನು ಸುಮಾರು 100 ಕುಂಡಗಳಲ್ಲಿ ಬೆಳೆಸಿದೆ. ಮಣ್ಣು, ಗೊಬ್ಬರ, ನೀರು ಹಾಕುತ್ತಾ ದಿನವೂ ಪೋಷಣೆಯಲ್ಲಿ ತೊಡಗಿದೆ. ಇದಕ್ಕೆ ಪತಿಯೂ ಸಹಕರಿಸಿದರು. ಗಿಡಗಳೊಂದಿಗೆ ದಿನವೂ ಮಾತಾಡುತ್ತಿದ್ದೆ ! ತಾರಸಿಯಲ್ಲಿ ಬೆಳೆಯಲು ತುಂಬ ಖರ್ಚು ಆಗುತ್ತದೆ ಎಂಬ ಮಾತು ಇದೆ. ಆದರೆ ಇದಕ್ಕೇನೂ ಹೆಚ್ಚಿನ ಹಣ ವ್ಯಯವಾಗಿಲ್ಲ ಎನ್ನುತ್ತಾರೆ ಅವರು.

ಸುಮಾರು ಮೂರು ತಿಂಗಳಿಗೆ ಗಿಡಗಳಲ್ಲಿ ಹೂ ಅರಳಲು ಶುರುವಾಯಿತು. ಕನಿಷ್ಠ ಆರು ತಿಂಗಳು ಹೂ ಕೀಳಬಾರದು. ಕಿತ್ತರೆ ಭವಿಷ್ಯದಲ್ಲಿ ಹೂವಿನ ಫಸಲು ಕುಂಠಿತವಾಗುತ್ತದೆ ಎಂದು ಎಲ್ಲೋ ಕೇಳಿದ್ದೆ. ಹಾಗಾಗಿ ಆರಂಭದಲ್ಲಿ ಹೂಗಳನ್ನು ಚಿವುಟಿ ಹಾಕುತ್ತಿದ್ದೆ. ನಂತರ ಬಯಸಿದ್ದಕ್ಕಿಂತ ಹೆಚ್ಚಿನ ಹೂಗಳು ಅರಳತೊಡಗಿದವು. ಹೂ ಕಟ್ಟುವ ಬಗೆ ತಿಳಿದಿರಲಿಲ್ಲ. ನಂತರ ಯೂಟ್ಯೂಬ್ ನೋಡಿಯೇ ಬಾಳೆಯ ದಿಂಡು ಬಳಸಿ ಹೂ ಕಟ್ಟತೊಡಗಿದೆ ಎನ್ನುತ್ತಾ ಕೃಷಿಯಲ್ಲಿನ ಖುಷಿಯನ್ನು ಹಂಚಿಕೊಂಡರು.

ಯುಟ್ಯೂಬ್ ಮಾರ್ಗದರ್ಶಿ 

ತಾರಸಿ ಕೈತೋಟದಲ್ಲಿ ಮಲ್ಲಿಗೆಯ ಕೃಷಿ ಮಾಡುವುದು ಹೇಗೆ ಎಂದು ಈ ಮೊದಲು ಹುಡುಕಾಡುತ್ತಿದೆ. ಈಗ ಬೇರೆಯವರು ತಾರಸಿಯ ಮಲ್ಲಿಗೆ ಕೃಷಿ ಮಾಡುವ ಬಗ್ಗೆ ನಾನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ ವೀಡಿಯೊಗಳಿಗಾಗಿ ಹುಡುಕಾಡುತ್ತಿದ್ದಾರೆ. ಈ ವಿಚಾರದಲ್ಲಿ ಯುಟ್ಯೂಬ್ ನನಗೆ ಮಾರ್ಗದರ್ಶಿ ಎನ್ನುತ್ತಾರೆ ಮಲ್ಲಿಗೆಯ ಬೆಳೆದ ಕೊಂಚಾಡಿ ನಿವಾಸಿ ಅಡ್ವೊಕೇಟ್ ಕಿರಣ.

ತಿಂಗಳಿಗೆ 15 ಸಾವಿರಕ್ಕೂ ಅಧಿಕ ಆದಾಯ

ತಾರಸಿ ಕೈತೋಟದಲ್ಲಿ ಮಲ್ಲಿಗೆ ಬೆಳೆಯಲು ಸಾವಿರಾರು ರೂ. ಬಂಡವಾಳ ಹೂಡುವ ಅಗತ್ಯವಿಲ್ಲ. ಅತಿ ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆದು ಅಧಿಕ ಪ್ರಮಾಣದ ಆದಾಯ ಗಳಿಸಿದ್ದೇನೆ. ಪ್ರತಿ ತಿಂಗಳಿಗೆ ಅಂದಾಜು 15 ಸಾವಿರಕ್ಕೂ ಹೆಚ್ಚು ಹಣ ಕೈಸೇರುತ್ತದೆ. ಎಲ್ಲ ಸಮಯದಲ್ಲೂ ಮಂಗಳೂರು ಮಹಾನಗರ ಪಾಲಿಕೆಯ ನೀರನ್ನು ನೆಚ್ಚಿಕೊಳ್ಳುವುದು ಕಷ್ಟಸಾಧ್ಯ. ಮಲ್ಲಿಗೆಯ ಆದಾಯದಿಂದಲೇ ಕಂಪೌಂಡ್‌ನ ಆವರಣದೊಳಗೆ ಬಾವಿ ತೊಡಿಸಿದೆ. ಅದೇ ನೀರು ಈಗ ತಾರಸಿ ತೋಟಕ್ಕೆ ಸರಬರಾಜು ಆಗುತ್ತಿದೆ. ಇದೇ ಹಣದಲ್ಲಿ ಬಡವರು, ನಿರ್ಗತಿಕರು, ಮಕ್ಕಳಿಗೆ ಶಾಲಾ ಫೀಸು ಸಹಿತ ಸಹಾಯಹಸ್ತ ನೀಡುತ್ತೇನೆ ಎನ್ನುತ್ತಾರೆ ಕಿರಣ.

''ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಾವಿರಾರು ದಾರಿಗಳಿವೆ. ಪೆನ್ನು ಹಿಡಿಯುವ ಕೈ, ಮಣ್ಣು ಹಿಡಿದು ಸಾಧಿಸಬಹುದು. ಮನೆಯಲ್ಲೇ ಇರುವ ಗೃಹಿಣಿಯರು ಪತಿಗೆ ಆರ್ಥಿಕವಾಗಿ ಸಹಕಾರ ನೀಡಬೇಕು. ತಾರಸಿ ಕೈತೋಟ ನಿರ್ವಹಣೆ ಬಲು ಸುಲಭ''.
- ಅಡ್ವೊಕೇಟ್ ಕಿರಣ, ಹವ್ಯಾಸಿ ಕೃಷಿಕ ಮಹಿಳೆ, ಕೊಂಚಾಡಿ

Full View

Writer - ಬಂದೇ ನವಾಝ್ ಮ್ಯಾಗೇರಿ

contributor

Editor - ಬಂದೇ ನವಾಝ್ ಮ್ಯಾಗೇರಿ

contributor

Similar News