ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಹಿನ್ನಡೆ: ರದ್ದಾಗಲಿದೆ ಪೂರ್ವಾನ್ವಯ ತೆರಿಗೆ ಕಾಯ್ದೆ
ಹೊಸದಿಲ್ಲಿ, ಆ.5: ಕಂಪೆನಿಗಳ ವಿರುದ್ಧ ಪೂರ್ವಾನ್ವಯವಾಗುವಂತೆ ತೆರಿಗೆ ವಿಧಿಸುವ 2012ರ ವಿವಾದಾತ್ಮಕ ಕಾಯ್ದೆಯನ್ನು ಕೇಂದ್ರ ಸರಕಾರ ರದ್ದುಗೊಳಿಸಲಿದ್ದು ಕೇಂದ್ರದ ಈ ಉಪಕ್ರಮದಿಂದ ವೊಡಫೋನ್, ಕೈರ್ನ್ ಮುಂತಾದ ಬೃಹತ್ ಟೆಲಿಫೋನ್ ಸಂಸ್ಥೆಗಳಿಗೆ ನೆರವಾಗಲಿದೆ ಎಂದು ವರದಿಯಾಗಿದೆ. ಭಾರತದ 2012ರ ಕಾಯ್ದೆಯನ್ನು ಪ್ರಶ್ನಿಸಿ ವೊಡಫೋನ್ ಮತ್ತು ಕೈರ್ನ್ ಸಂಸ್ಥೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದರಲ್ಲಿ ಭಾರತ ಸರಕಾರದ ವಿರುದ್ಧ ತೀರ್ಪು ಬಂದಿದೆ.
ಪೂರ್ವಾನ್ವಯದ ತೆರಿಗೆ, ಅದರ ಮೇಲಿನ ಬಡ್ಡಿ ಮತ್ತು ದಂಡ ವಸೂಲಿಗೆ ಭಾರತ ಸರಕಾರ ಪ್ರಯತ್ನಿಸಬಾರದು ಎಂದು ನೆದರಲ್ಯಾಂಡಿನ ಅಂತರಾಷ್ಟ್ರೀಯ ನ್ಯಾಯಾಲಯ ಸೂಚಿಸಿದೆ. 2007ರಲ್ಲಿ ಹಚಿಸನ್ ವಾಂಫೊರ ಸಂಸ್ಥೆಯ ಮೊಬೈಲ್ ವ್ಯವಹಾರವನ್ನು ವೊಡಫೋನ್ 11 ಬಿಲಿಯನ್ ಡಾಲರ್ ಪಾವತಿಸಿ ಖರೀದಿಸಿದ್ದು, ಈ ವ್ಯವಹಾರಕ್ಕೆ ಸಂಬಂಧಿಸಿ ವೊಡಫೋನ್ ಸಂಸ್ಥೆ 11,000 ಕೋಟಿ ರೂ. ತೆರಿಗೆ ಪಾವತಿಸಬೇಕು ಎಂದು ಕೇಂದ್ರ ಸರಕಾರ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ವೊಡಫೋನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ವೊಡಫೋನ್ ಪರ ತೀರ್ಪು ಬಂದಿತ್ತು. ಆದರೆ, ಬಳಿಕ ತೆರಿಗೆ ನಿಯಮವನ್ನು ಬದಲಿಸಿದ ಕೇಂದ್ರ ಸರಕಾರ, ಹೊಸ ಕಾಯ್ದೆಯಂತೆ ವೊಡಫೋನ್ ಪೂರ್ವಾನ್ವಯ ತೆರಿಗೆ, ಬಡ್ಡಿ ಮತ್ತು ದಂಡ ಪಾವತಿಸಬೇಕು ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ವೊಡಫೋನ್ ಅಂತರಾಷ್ಟ್ರೀಯ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಆದರೆ ಈ ಸೂಚನೆ ಭಾರತ ಮತ್ತು ನೆದರಲ್ಯಾಂಡ್ ನಡುವಿನ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿರುವ ನ್ಯಾಯಮಂಡಳಿ, ಭಾರತ ಸರಕಾರ ಕಾನೂನು ಕ್ರಮಗಳ ವೆಚ್ಚವಾಗಿ ವೊಡಫೋನ್ ಸಂಸ್ಥೆಗೆ 40 ಕೋಟಿ ರೂ. ಪಾವತಿಸಬೇಕು ಎಂದಿದೆ. ಇದೇ ರೀತಿ, ಇಂಗ್ಲೆಂಡಿನ ತೈಲ ಸಂಸ್ಥೆ ಕೈರ್ನ್ ವಿರುದ್ಧದ ಪ್ರಕರಣದಲ್ಲೂ ಭಾರತ ಸರಕಾರಕ್ಕೆ ಸೋಲಾಗಿದೆ.