ವಾಯು ಗುಣಮಟ್ಟ ನಿರ್ವಹಣೆ ಆಯೋಗ ಸ್ಥಾಪನೆಯ ಮಸೂದೆಗೆ ಸಂಸತ್ ಅನುಮೋದನೆ
ಹೊಸದಿಲ್ಲಿ, ಆ.5: ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್) ಹಾಗೂ ಪಕ್ಕದ ಪ್ರದೇಶದಲ್ಲಿ ವಾಯು ಗುಣಮಟ್ಟ ನಿರ್ವಹಣೆಗೆ ಆಯೋಗವನ್ನು ರಚಿಸುವ ಉದ್ದೇಶದ ಮಸೂದೆಗೆ ಸಂಸತ್ತು ಗುರುವಾರ ಅನುಮೋದನೆ ನೀಡಿದೆ.
ವಿಪಕ್ಷಗಳ ಪ್ರತಿಭಟನೆಯ ಮಧ್ಯೆಯೇ ‘ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಇನ್ ನ್ಯಾಷನಲ್ ಕ್ಯಾಪಿಟಲ್ ರೀಜನ್ ಆ್ಯಂಡ್ ಅಡ್ಜಾಯ್ನಿಂಗ್ ಏರಿಯಾ ಬಿಲ್ 2021’ನ್ನು ಧ್ವನಿಮತದಿಂದ ಅನುಮೋದಿಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ. ಈ ಮಸೂದೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿದೆ. ಈ ಮಸೂದೆಯ ಮೂಲಕ ಕೇಂದ್ರ ಸರಕಾರ ಸಂಸತ್ತಿಗೆ ಉತ್ತರದಾಯಿತ್ವ ಹೊಂದಿದೆ. ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳ ನಿರ್ವಹಣೆ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ.
ಸೆಕ್ಷನ್ 14ನ್ನು ನಿರಪರಾಧೀಕರಿಸಲು ನಾವು ಪ್ರಯತ್ನಿಸಿದ್ದು, ರೈತರು ಕೃಷಿ ತ್ಯಾಜ್ಯ ಸುಡುವುದಕ್ಕೆ ಈ ಸೆಕ್ಷನ್ ಅನ್ವಯಿಸುವುದಿಲ್ಲ ಎಂದು ಮಸೂದೆಯ ಕುರಿತು ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ. ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯು ಗುಣಮಟ್ಟ ನಿರ್ವಹಣೆ ಉದ್ದೇಶದಿಂದ 2021ರ ಎಪ್ರಿಲ್ 13ರಂದು ರಾಷ್ಟ್ರಪತಿ ಜಾರಿಗೆ ತಂದಿರುವ ಸುಗ್ರೀವಾಜ್ಞೆ ರದ್ದಾಗಿದ್ದು ಇದರ ಬದಲು ಹೊಸ ಮಸೂದೆ ಜಾರಿಯಾಗಲಿದೆ ಎಂದು ಸಚಿವರು ಇದೇ ಘೋಷಿಸಿದರು. ವಾಯು ಮಾಲಿನ್ಯದ ಮೂಲಗಳು, ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ, ಹಲವು ಅಂಶಗಳನ್ನು ಹೊಂದಿದ್ದು ಇವು ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯನ್ನು ಮೀರಿದೆ. ವಿದ್ಯುತ್, ಕೃಷಿ, ಸಾರಿಗೆ, ಕೈಗಾರಿಕೆ, ಜನವಸತಿ ಪ್ರದೇಶ ಮತ್ತು ನಿರ್ಮಾಣ ಕಾಮಗಾರಿ ಇತ್ಯಾದಿಗಳಿಗೆ ಸಂಬಂಧಿಸಿದ ವಾಯು ಮಾಲಿನ್ಯ ನಿಯಂತ್ರಿಸಲು ವಿಶೇಷ ಗಮನದ ಅಗತ್ಯವಿದೆ. ವಾಯು ಮಾಲಿನ್ಯ ಸ್ಥಳೀಯ ಸಮಸ್ಯೆಯಲ್ಲ, ಇದರ ಪರಿಣಾಮ ದೂರದ ಪ್ರದೇಶದವರೆಗೂ ವ್ಯಾಪಕವಾಗಿರುತ್ತದೆ. ಆದ್ದರಿಂದ ಅಂತರ್‌ರಾಜ್ಯ, ಅಂತರ್‌ನಗರ ಹೊಂದಾಣಿಕೆಯ ಪ್ರಾದೇಶಿಕ ಮಟ್ಟದ ಉಪಕ್ರಮಗಳ ಅಗತ್ಯವಿದೆ ಎಂದು ಸಚಿವರು ಹೇಳಿದರು.