ಜಮ್ಮು ಕಾಶ್ಮೀರದಲ್ಲಿ 2019ರಿಂದ 2,300 ಜನರ ವಿರುದ್ಧ ಯುಎಪಿಎ, ಪಿಎಸ್‌ಎ ಅಡಿ ಪ್ರಕರಣ ದಾಖಲು

Update: 2021-08-05 18:21 GMT

ಶ್ರೀನಗರ, ಆ. 5: ಜಮ್ಮು ಹಾಗೂ ಕಾಶ್ಮೀರ ಆಡಳಿತ 2019ರಿಂದ 2,300ಕ್ಕೂ ಅಧಿಕ ಜನರ ಮೇಲೆ ಯುಎಪಿಎ (ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ) ಹಾಗೂ ಪಿಎಸ್‌ಎ (ಸಾರ್ವಜನಿಕ ಸುರಕ್ಷಾ ಕಾಯ್ದೆ)ಅಡಿಯಲ್ಲಿ 1,200ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದೆ.

ಇವರಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾದ ಶೇ. 46 ಮಂದಿ ಹಾಗೂ ಪಿಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಾದ ಶೇ. 30 ಮಂದಿ ಜಮ್ಮು ಹಾಗೂ ಕಾಶ್ಮೀರದ ಒಳಗೆ ಹಾಗೂ ಹೊರಗೆ ಇರುವ ಜೈಲುಗಳಲ್ಲಿ ಇದ್ದಾರೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪರಿಶೀಲಿಸಿದ ಅಧಿಕೃತ ಪೊಲೀಸ್ ದತ್ತಾಂಶಗಳ ಪ್ರಕಾರ, ಪಿಎಸ್‌ಎ ಅಡಿಯಲ್ಲಿ 2019ರಲ್ಲಿ 699 ಹಾಗೂ 2020ರಲ್ಲಿ 160 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜುಲೈ ಅಂತ್ಯದ ವರೆಗೆ ಪಿಎಸ್‌ಎ ಕಾಯ್ದೆ ಅಡಿಯಲ್ಲಿ 95 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಇವರಲ್ಲಿ 284 ಮಂದಿ ಇನ್ನೂ ವಶದಲ್ಲೇ ಇದ್ದಾರೆ. 2019 ಆಗಸ್ಟ್ 5ರಂದು ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಮೊದಲ 30 ದಿನಗಳಲ್ಲಿ ಕನಿಷ್ಠ 290 ಮಂದಿಯ ವಿರುದ್ಧ ಪಿಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಸೇರಿದ್ದಾರೆ. ಕಾಶ್ಮೀರ ವಲಯದಲ್ಲಿ ಈ ಕಾನೂನಿನ ಅಡಿಯಲ್ಲಿ ಕನಿಷ್ಠ 250 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಯುಎಪಿಎ ಅಡಿಯಲ್ಲಿ ಬಂಧಿತರಾದ 2,364 ಜನರಲ್ಲಿ 2019ರಲ್ಲಿ 918 ಮಂದಿಯನ್ನು 437 ಪ್ರಕರಣಗಳಲ್ಲಿ, 2020ರಲ್ಲಿ 953 ಮಂದಿಯನ್ನು 557 ಪ್ರಕರಣಗಳಲ್ಲಿ, ಜುಲೈ ಅಂತ್ಯದವರೆಗೆ 493 ಮಂದಿಯನ್ನು 275 ಪ್ರಕರಣಗಳಲ್ಲಿ (ಕಾಶ್ಮೀರದಲ್ಲಿ 249 ಹಾಗೂ ಜಮ್ಮುವಿನಲ್ಲಿ 26 ಪ್ರಕರಣಗಳು) ಬಂಧಿಸಲಾಗಿದೆ. ಇವರಲ್ಲಿ 1,100 ಮಂದಿ ಇನ್ನು ಕೂಡ ಕಸ್ಟಡಿಯಲ್ಲೇ ಇದ್ದಾರೆ.

2020ರಲ್ಲಿ ಪಿಎಸ್‌ಎ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ, ಯುಎಪಿಎ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪೊಲೀಸರು ಪಿಎಸ್‌ಎ ಬದಲು ಕಠಿಣ ಕಾಯ್ದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿರುವುದರಿಂದ ಈ ಬದಲಾವಣೆ ಕಂಡು ಬಂದಿದೆ. ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆ. ಈ ನಡುವೆ 2019ರಲ್ಲಿ ಸಿಆರ್‌ಪಿಸಿಯ ಸೆಕ್ಷನ್ 107ರ ಅಡಿಯಲ್ಲಿ 5,500 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅವರೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News