ರೆಪೊ ದರ ಯಥಾಸ್ಥಿತಿ ಮುಂದುವರಿಕೆ: ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್

Update: 2021-08-06 05:57 GMT

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಮುಖ ಬಡ್ಡಿದರಗಳನ್ನು ಬದಲಾಯಿಸದೆ ಯಥಾ ಸ್ಥಿತಿಯಲ್ಲಿರಿಸಿದೆ ಹಾಗೂ ಮತ್ತಷ್ಟು ಆರ್ಥಿಕ ಚೇತರಿಕೆಗೆ ನೆರವಾಗುವ ಸಲುವಾಗಿ ಒಂದು ಹೊಂದಾಣಿಕೆಯ ನಿಲುವನ್ನು ಕಾಯ್ದುಕೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ)ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದು ಈಗಿರುವ ಶೇ.4ರ ರೆಪೊ(ಬಡ್ಡಿ)ದರವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಈಗಿರುವ ಶೇ.3.35ರ ರಿವರ್ಸ್ ರೆಪೊ ದರವನ್ನೂ ಹಾಗೆಯೇ ಮುಂದುವರಿಸಲಾಗಿದೆ.

ಈ ಮೂಲಕ ಆರ್ ಬಿಐ ಹಣಕಾಸು ನೀತಿ ಸಮಿತಿಯು ಸತತ 7 ಬಾರಿ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಂತಾಗಿದೆ. ಈ  ಹಿಂದೆ 2020ರ ಮೇ 22ರಂದು ಆರ್ ಬಿ ಐ ರೆಪೊ ದರಲ್ಲಿ ಕಡಿತ ಮಾಡಿತ್ತು.

ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಪ್ರಭಾವದಿಂದ ಆರ್ಥಿಕತೆಯು ಚೇತರಿಸಿಕೊಳ್ಳುವವರೆಗೆ ಆರ್ ಬಿಐ ಹಣಕಾಸು ನೀತಿ ಸಮಿತಿಯು ಯಥಾಸ್ಥಿತಿ ಕಾಯ್ದುಕೊಳ್ಳಲಿದೆ. ಆದರೆ ದೇಶವು ಉತ್ತಮ ಸ್ಥಿತಿಯಲ್ಲಿದೆ ಹಾಗೂ  ಹಲವು ಆರ್ಥಿಕ ಸೂಚಕಗಳು ಸುಧಾರಿಸಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News