ಪೆಗಾಸಸ್ ಸ್ಪೈವೇರ್ ಹಗರಣ: ಸುಪ್ರೀಂಕೋರ್ಟ್ ಕದ ತಟ್ಟಿದ ಯಶವಂತ್ ಸಿನ್ಹಾ

Update: 2021-08-06 09:58 GMT

ಹೊಸದಿಲ್ಲಿ: ಪೆಗಾಸಸ್ ಬೇಹುಗಾರಿಕೆ ಕುರಿತ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಕೋರಿ ಮಾಜಿ ಕೇಂದ್ರ ಸಚಿವ, ಪ್ರಸ್ತುತ ತೃಣಮೂಲ ಕಾಂಗ್ರೆಸ್ ನಾಯಕರಾಗಿರುವ ಯಶವಂತ್ ಸಿನ್ಹಾ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಹಾಗೂ ಯಾವುದೇ ಸಚಿವಾಲಯ ಅಥವಾ ಸರಕಾರಿ ಏಜನ್ಸಿ ಬೇಹುಗಾರಿಕೆಗೆ ಸಲ್ಲಿಸಿರಬಹುದಾದ ಮನವಿ ಕುರಿತಾದ ವಿಚಾರವನ್ನು ಪರಿಶೀಲಿಸಲು ಒಂದು ವ್ಯವಸ್ಥೆಯನ್ನು  ರೂಪಿಸಬೇಕೆಂದೂ ಅವರು ಕೋರಿದ್ದಾರೆ.

"ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸರಕಾರವು ದೃಢೀಕೃತ ಮಿಲಿಟರಿ ಗ್ರೇಡ್ ವಿದೇಶಿ ಸ್ಪೈವೇರ್ ಅನ್ನು ತನ್ನ ನಾಗರಿಕರ ವಿರುದ್ಧ ಬಳಸಿದೆ" ಎಂದು ಯಶವಂತ್ ಸಿನ್ಹಾ ತಮ್ಮ ಅರ್ಜಿಯಲ್ಲಿ ಹೇಳಿದ್ದಾರಲ್ಲದೆ "ತಮ್ಮ ವೈಯಕ್ತಿಕ ಮಾಹಿತಿಯನ್ನು  ವಿದೇಶಿ ಅಥವಾ ಭಾರತೀಯ ಏಜನ್ಸಿಗಳು ಬಳಸಿವೆಯೇ ಎಂದು ತಿಳಿಯುವ ಹಕ್ಕು ನಾಗರಿಕರಿಗಿದೆ" ಎಂದು ವಾದಿಸಿದ್ದಾರೆ.

ಪೆಗಾಸಸ್ ಮೂಲಕ ಹಲವಾರು ಪತ್ರಕರ್ತರನ್ನು ಟಾರ್ಗೆಟ್ ಮಾಡಲಾಗಿತ್ತು ಎಂದು ಸಿನ್ಹಾ ಅವರ ಅರ್ಜಿಯಲ್ಲಿ ಹೇಳಲಾಗಿದೆಯಲ್ಲದೆ ಇದು ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಹಾಗೂ ವಾಕ್ ಸ್ವಾತಂತ್ರ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ಭಯಪಟ್ಟಿದ್ದಾರೆ.

ಪೆಗಾಸಸ್ ಕುರಿತಂತೆ ಸಿನ್ಹಾ ಅವರ ಅರ್ಜಿ ಸಹಿತ ಇತರ ಅರ್ಜಿಗಳನ್ನು ಗುರುವಾರ ಪರಿಗಣಿಸಿದ ಸಿಜೆಐ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಅರ್ಜಿಗಳ ಪ್ರತಿಯನ್ನು ಕೇಂದ್ರಕ್ಕೆ ಸಲ್ಲಿಸುವಂತೆ ಸೂಚಿಸಿತಲ್ಲದೆ ಮುಂದಿನ ವಿಚಾರಣೆ ಆಗಸ್ಟ್ 10ರಂದು ನಡೆಯುವಾಗ ಸರಕಾರದ ಪರ ವಕೀಲರು ಹಾಜರಿರಬೇಕೆಂದು ಹೇಳಿದೆ.

ಸಿನ್ಹಾ ಅವರ ಹೊರತಾಗಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಶಶಿ ಕುಮಾರ್, ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್, ವಕೀಲ ಎಂ ಎಲ್ ಶರ್ಮ, ಪತ್ರಕರ್ತರಾದ ಪರಂಜೋಯ್ ಗುಹಾ ಥಾಕುರ್ತ, ಪ್ರೇಮ್ ಶಂಕರ್ ಝಾ, ಎಸ್ ಎನ್ ಎಂ ಅಬ್ದಿ, ರೂಪೇಶ್ ಕುಮಾರ್ ಸಿಂಗ್ ಮತ್ತು ಇಪ್ಸಾ ಶತಕ್ಸಿ ಅವರು ಕೂಡ ಪೆಗಾಸಸ್ ಸ್ಪೈವೇರ್ ಬಳಕೆ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್‍ನ ಕದ ತಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News