×
Ad

ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್ ಹೆಸರು; ನರೇಂದ್ರ ಮೋದಿ ಸ್ಟೇಡಿಯಂಗೂ ಕ್ರೀಡಾಳುಗಳ ಹೆಸರು ನೀಡಲು ಆಗ್ರಹ

Update: 2021-08-06 16:26 IST

ಹೊಸದಿಲ್ಲಿ: ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಾಕಿ ದಂತಕಥೆ ಧ್ಯಾನ್ ಚಂದ್ ಅವರ ಗೌರವಾರ್ಥ ಮರುನಾಮಕರಣಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ಈ ಕ್ರಮವನ್ನು ಶ್ಲಾಘಿಸಿದ ಸಾಮಾಜಿಕ ಜಾಲತಾಣಿಗರು, ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾಳುಗಳ ಹೆಸರುಗಳನ್ನು ನೀಡಬೇಕೇ ವಿನಃ ರಾಜಕಾರಣಿಗಳ ಹೆಸರಲ್ಲ ಎಂದು ಹೇಳುವುದರ ಜತೆಗೆ ಪ್ರಧಾನಿಗೆ ಅವರ ಹೆಸರಿನಲ್ಲಿರುವ ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನ ಅಹ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಬಗ್ಗೆ ಕೂಡ ನೆನಪಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂಗೂ ಕ್ರೀಡಾಳುವೊಬ್ಬರ ಹೆಸರಿನೊಂದಿಗೆ ಮರುನಾಮಕರಣಗೊಳಿಸಬೇಕು ಎಂದು ವಿಪಕ್ಷ ನಾಯಕರುಗಳು ಸೇರಿದಂತೆ ಹಲವು ಸಾಮಾಜಿಕ ಜಾಲತಾಣಿಗರು ಆಗ್ರಹಿಸಿದ್ದಾರೆ.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ  ಅಹ್ಮದಾಬಾದ್‍ನ ಸರ್ದಾರ್ ಪಟೇಲ್ ಸ್ಟೇಡಿಯಂಗೆ  ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರಾಗಿದ್ದ ಪ್ರಧಾನಿ ಮೋದಿಯ ಹೆಸರನ್ನಿಡಲಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ಖೇಲ್ ರತ್ನ ಪ್ರಶಸ್ತಿ ಹೆಸರು ಮರುನಾಮಕರಣ ಕುರಿತು  ಟ್ವೀಟ್ ಮಾಡಿದ ಕ್ರಿಕೆಟಿಗ ಇರ್ಫಾನ್ ಪಠಾನ್ "ಭವಿಷ್ಯದಲ್ಲಿ ಕ್ರೀಡಾಂಗಣಗಳಿಗೂ ಕ್ರೀಡಾಳುಗಳ ಹೆಸರುಗಳನ್ನು ನೀಡಲಾಗುವುದೆಂದು ಆಶಿಸುತ್ತೇನೆ" ಎಂದು ಬರೆದಿದ್ದಾರೆ.

ಖ್ಯಾತ ಯುಟ್ಯೂಬರ್ ಧ್ರುವ್ ರಾಠೀ ಪ್ರತಿಕ್ರಿಯಿಸಿ "ಮೋದಿ ಸರಕಾರದಿಂದ ಉತ್ತಮ ನಿರ್ಧಾರ.  ಈಗ ಅವರು ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಜೇಟ್ಲಿ ಸ್ಟೇಡಿಯಂಗಳನ್ನೂ ಮರುನಾಮಕರಣಗೊಳಿಸಬಹುದೆಂದು ಆಶಿಸುತ್ತೇನೆ. ಎಲ್ಲಾ ರಾಜಕಾರಣಿಗಳ ಹೆಸರು ತೆಗೆದುಬಿಡಿ" ಎಂದು ಬರೆದಿದ್ದಾರೆ.

ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂಗೆ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ನಿಧನಾನಂತರ ಅವರ ಹೆಸರನ್ನಿಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಕಪಿಲ್ ದೇವ್ ಅಥವಾ ಸಚಿನ್ ತೆಂಡೂಲ್ಕರ್ ಸ್ಟೇಡಿಯಂ ಎಂದು ನಾಮಕರಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಗುಜರಾತ್‍ನ ವಿಪಕ್ಷ ನಾಯಕ ಶಂಕರ್ ಸಿಂಗ್ ವಘೇಲಾ ಟ್ವೀಟ್ ಮಾಡಿ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಮತ್ತೆ ನಾಮಕರಣಗೊಳಿಸಬೇಕೆಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News